Tuesday, January 29, 2013

Report from Davangere unit

'ವೈಜ್ಞಾನಿಕ ವಿಚಾರ ಧಾರೆ ಬಿತ್ತುವುದೇ ಧ್ಯೇಯ'

First Published: 28 Jan 2013 11:21:53 AM IST

ಹರಪನಹಳ್ಳಿ: ವೈಜ್ಞಾನಿಕ ವಿಚಾರ ಧಾರೆ ಮೂಲಕ ವಿಜ್ಞಾನವನ್ನು ಜನ ಸಾಮಾನ್ಯರಿಗೆ ಮುಟ್ಟಿಸುವುದೇ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಮೂಲ ಉದ್ದೇಶವಾಗಿದೆ ಎಂದು ಸಮಿತಿ ರಾಜ್ಯ ಘಟಕದ ಸಹ ಕಾರ್ಯದರ್ಶಿ ಎಚ್. ಚಂದ್ರಪ್ಪ ತಿಳಿಸಿದ್ದಾರೆ.

 ಅವರು ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಅವೈಜ್ಞಾನಿಕ ವಿಚಾರಗಳನ್ನು ದೃಶ್ಯ ಮಾಧ್ಯಮಗಳು ದಿನನಿತ್ಯ ಬಿತ್ತರಿಸುತ್ತವೆ. ವಿಜ್ಞಾನವನ್ನು ಜ್ಞಾನದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.

ವಿಜ್ಞಾನ ಚಳವಳಿ: ಬಹಳಷ್ಟು ಜನ ಅಕ್ಷರಸ್ಥರೇ ಇಂದು ಅವೈಜ್ಞಾನಿಕತೆ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವಿಜ್ಞಾನ ಚಳವಳಿ ಕಟ್ಟುವ ಕೆಲಸದಲ್ಲಿ ಕೈ ಜೋಡಿಸಬೇಕು ಎಂದು ಅವರು ಹೇಳಿದರು.

ಶಿಕ್ಷಣ ಮಹಾವಿದ್ಯಾಲಯದ ಪ್ರೊ. ತಿಮ್ಮಪ್ಪ ಅವರು ಜನರಲ್ಲಿ ಮೌಢ್ಯ ರಕ್ತಗತವಾಗಿ ತುಂಬಿವೆ. ಮೌಢ್ಯಗಳನ್ನು ಮೌಲ್ಯವೆಂದು ಭಾವಿಸಿದ್ದಾರೆ. ಅವುಗಳನ್ನು ಹೋಗಲಾಡಿಸಿ ವೈಜ್ಞಾನಿಕ ಚಿಂತನೆಗೆ ಹಚ್ಚಬೇಕು, ಜಾತಿ, ಧರ್ಮ ಮೀರಿ ಈ ಸಂಘಟನೆ ಕೆಲಸ ಮಾಡುತ್ತಿದೆ ಎಂದು ಅವರು ವಿಜ್ಞಾನ ಸಮಿತಿಯನ್ನು ಶ್ಲಾಘಿಸಿದರು.

 ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ತಾಲೂಕು ಘಟಕದ ನೂತನ ಅಧ್ಯಕ್ಷ ಇಸ್ಮಾಯಿಲ್ ಎಲಿಗಾರ ಮಾತನಾಡಿ, ಮನೋಬಲ ಹೆಚ್ಚಿಸಲು ಇಂತಹ ಸಂಘಟನೆ ಬಹಳ ಅವಶ್ಯಕವಾಗಿದ್ದು, ಈ ಸಂಘಟನೆಯಲ್ಲಿ ಹೆಚ್ಚಿನವರು  ಶಿಕ್ಷಕರಿದ್ದು, ಸಾಮಾಜಿಕ ಬದ್ಧತೆ ಇರಬೇಕು. ಅದಕ್ಕೆ ಅಧ್ಯಯನಶೀಲತೆ ಬಹಳ ಮುಖ್ಯ ಕೇವಲ ಕೆಜಿವಿಎಸ್ ಗೆ ಸದಸ್ಯರಾದರೆ ಸಾಲದು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಸಂಘಟನೆಯ ಜಿಲ್ಲಾ ಮುಖಂಡಅಲಿಖಾನ್, ಜಿಲ್ಲಾ ಸಮಿತಿ ಸದಸ್ಯ ಬಸವರಾಜ, ರಾಜ್ಯ ಸಮಿತಿ ಸದಸ್ಯ ಗಂಗಾಧರ, ಅಶೋಕ, ಅಂಜಿನಪ್ಪ, ಸದಾಶಿವ, ಹೂವಣ್ಣ ಇದ್ದರು.

Harapanahalli taluk convention

Harapanahalli taluk convention of KJVS held on 27.01.2013; New taluk committee is formed with Ismail yeligar as president and Sadashiv as secretary and Anjinappa as treasurer.







Monday, January 28, 2013

Harihar taluk convention

 Harihar taluk convention of KJVS 
and they have elected new taluk committee.








Saturday, January 19, 2013

KJVS; A birds eye view

ಹಿನ್ನೆಲೆ:

ಜಗತ್ತು ನಿರಂತರ ಬದಲಾವಣೆಯಿಂದ ಕೂಡಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅದರಲ್ಲಿಯೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಬದಲಾವಣೆ ಹೆಚ್ಚು ವೇಗದಿಂದ ಕೂಡಿದೆ. ಇದು ಸಮಾಜದ ಎಲ್ಲ ಸ್ಥರಗಳ ಮೇಲೆ ತನ್ನದೇ ಆದ ಪರಿಣಾಮವನ್ನುಂಟು ಮಾಡುತ್ತಿದೆ. ಬದಲಾದ ಕಾಲಕ್ಕೆ ಅಗತ್ಯವಾದ ಶಿಕ್ಷಣ ನೀಡಬೇಕಾಗಿರುವುದು ನಾಗರೀಕ ಸಮಾಜದ ಕರ್ತವ್ಯ. ಇಂಥ ಬದಲಾವಣೆಗಳ ಬಗ್ಗೆ ಶಿಕ್ಷಕರು ಹಾಗೂ ಶಿಕ್ಷ್ಷಣಾಸಕ್ತರು ಆಗಿಂದಾಗ್ಯೆ ಒಂದೆಡೆ ಕಲೆತು ಚರ್ಚೆ ನಡೆಸುವುದು ಅಗತ್ಯವಾಗಿರುತ್ತದೆ. ಇದು ಔಪಚಾರಿಕವಾದಿ ತರಬೇತಿಗಳಲ್ಲಿ ಸಾಮಾನ್ಯವಾಗಿ ನಡೆಯುವುದಿಲ್ಲ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಹಾಗೂ ಸಾರ್ವಜನಿಕರ ನೆರವಿನಿಂದ ಸಂಘಟಿಸುತ್ತಾ ಬಂದಿದೆ. ಶಿಕ್ಷಣದ ಸಾರ್ವತ್ರೀಕರಣಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರಗಳ ಕರ್ತವ್ಯವಾದರೆ ಮಗುವನ್ನು ಶಾಲೆಯತ್ತ  ಆಕರ್ಷಿಸುವ ಹಾಗೂ ಸಮುದಾಯವನ್ನು ಶಾಲೆಯ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸುವ ಪ್ರಯತ್ನದಲ್ಲಿ ಸಂಘ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬಹುದು ಎಂಬುದು ಕೆಜೆವಿಎಸ್ ನಂಬಿಕೆ. ಈ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೆಜೆವಿಎಸ್ ಸಂಘಟಿಸಿದೆ. ಅವುಗಳಲ್ಲಿ ಪ್ರಮುಖವಾದವು:

  • ವಾತಾವರಣ ನಿರ್ಮಾಣ
  • ತರಬೇತಿ ಹಾಗೂ ಓದುವ ಸಾಮಗ್ರಿ ತಯಾರಿಕೆ
  • ಆಕಾಶವೀಕ್ಷಣೆ, ಗ್ರ್ರಹಣ/ಧೂಮಕೇತುಗಳ ವೀಕ್ಷಣೆ, ಮಕ್ಕಳಿಗಾಗಿ ಬೇಸಿಗೆ ಶಿಬಿರಗಳು
  • ಪತ್ರಿಕೆ ಹಾಗೂ ಪುಸ್ತಕಗಳ ಪ್ರಕಟಣೆ 
  • ವಿಜ್ಞಾನ ಹಾಗೂ ವ್ಶೆಜ್ಞಾನಿಕ ಮನೋಭಾವಕ್ಕೆ ಸಂಬಂಧಿಸಿದ ಜಾಥಾ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮ, ಹಾಗೂ ಕಾರ್ಯಾಗಾರಗಳು


ಕೆಜೆವಿಎಸ್ ನಡೆಸುವ ತರಬೇತಿಗಳು/ಕಾರ್ಯಕ್ರಮಗಳು ಬಹುತೇಕ ಅನೌಪಚಾರಿಕವಾಗಿರುತ್ತವೆ. ಇಲ್ಲಿ ಶಿಕ್ಷಕರು ತಮ್ಮ ಬಿಡುವಿನ ವೇಳೆಯಲ್ಲಿ ಹಾಗೂ ರಜಾ ದಿನಗಳಲ್ಲಿ ತಮಗೆ ಇಷ್ಟವಾದ ವಿಷಯವನ್ನು ಕಲಿಯುತ್ತಾರೆ. ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿಕೊಂಡು ಹೋಗುವುದಕ್ಕಿಂತ ತಮ್ಮ ನಡುವೆಯಿರುವ ಪರಿಣಿತ ಶಿಕ್ಷಕರನ್ನೇ ಬಳಸಿಕೊಳ್ಳುತ್ತಾರೆ. ಬೇಸಿಗೆ ಶಿಬಿರಗಳು ಹಾಗೂ ಗ್ರಹಣ/ಧೂಮಕೇತುಗಳ ವೀಕ್ಷಣೆಯ ಸಂದರ್ಭದಲ್ಲಿ ಸಮುದಾಯವನ್ನು ಪರಿಣಾಮಕಾರಿಯಾಗಿ ಒಳಗೊಳ್ಳಲಾಗುತ್ತದೆ. ಸಮಿತಿ ಸಂಘಟಿಸುವ ಬಹುತೇಕ ಕಾಂiiಕ್ರಮಗಳನ್ನು ಸಾರ್ವಜನಿಕರ ನೆರವಿನಿಂದಲೇ ಸಂಘಟಿಸಲಾಗುತ್ತದೆ.

ಇಂತಹ ತರಬೇತಿಗಳು ಹಾಗೂ ಕಾರ್ಯಕ್ರಮಗಳ ಸಂದರ್ಭದಲ್ಲಿ ಗಳಿಸಿದ ಶಿಕ್ಷಕರೊಂದಿಗಿನ ಸಂಪರ್ಕವನ್ನು ಮುಂದುವರೆಸುವ, ಅವರಿಗೆ ಅಗತ್ಯವಾದ ಮಾಹಿತಿಗಳನ್ನು ಕಾಲ ಕಾಲಕ್ಕೆ ಒದಗಿಸುವ ಉದ್ದೇಶದಿಂದ ಶಿಕ್ಷಣ ಶಿಲ್ಪಿ ಮಾಸ ಪತ್ರಿಕೆಯನ್ನು ಕೆಜೆವಿಎಸ್ ಪ್ರಕಟಿಸುತ್ತಿದೆ. ಶಿಕ್ಷಕರು ತಾವೇ ಚಂದಾ ಹಣವನ್ನು ನೀಡಿ ಪತ್ರಿಕೆಯನ್ನು ತರಿಸಿಕೊಳ್ಳುವುದರಿಂದ ಪತ್ರಿಕೆಯಲ್ಲಿನ ಲೇಖನಗಳನ್ನು ಓದುವಲ್ಲಿ, ಪತ್ರಿಕೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸುವಲ್ಲಿ ಸಕ್ರಿಯರಾಗಿ ತೊಡಗಿಕೊಳ್ಳುತ್ತಾರೆ. ಬಹಳ ಮುಖ್ಯವಾಗಿ ಶಿಕ್ಷಕರು ತಮ್ಮ ಅಭಿವ್ಯಕ್ತಿಯನ್ನು ಪ್ರದರ್ಶಿಸಲು, ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶಿಕ್ಷಣ ಶಿಲ್ಪಿ ಒಂದು ವೇದಿಕೆಯಾಗಲಿದೆ. ಇದು ಶಿಕ್ಷಕರ ಸೃಜನಶೀಲತೆಯನ್ನು ಕ್ರಿಯಾಶೀಲಗೊಳಿಸುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಲಿದೆ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ(ಕೆಜೆವಿಎಸ್) 

ವಿಜ್ಞಾನವನ್ನು ಜನಪ್ರಿಯಗೊಳಿಸುವುದು, ವೈಜ್ಞಾನಿಕ ಚಿಂತನೆ ಬೆಳೆಸುವುದು, ವಿಜ್ಞಾನ ಮತ್ತು ತಂತ್ರಜ್ಞಾನ ಯೋಜನೆಗಳು ಜನಸಾಮಾನ್ಯರ ದಿನ ನಿತ್ಯದ ಸಮಸ್ಯೆಗಳಿಗೆ ಪರಿಹಾರವಾಗಿ ರೂಪುಗೊಳ್ಳುವಂತೆ ಒತ್ತಾಯಿಸುವುದು, ಜನಪರ ವಿಜ್ಞಾನ ಮತ್ತು ತಂತ್ರಜ್ಞಾನಗಳಿಗಾಗಿ ಸಕಾರಾತ್ಮಕವಾಗಿ ಕೆಲಸ ಮಾಡುವುದು, ಓದುವ ಹವ್ಯಾಸ ಬೆಳೆಸುವುದು ಇವೇ ಮೊದಲಾದ ಉದ್ದೇಶಗಳನ್ನಿಟ್ಟುಕೊಂಡು ಕಳೆದ ಒಂದು ವರ್ಷದಿಂದ ಕರ್ನಾಟಕ ಜ್ಞಾನ  ವಿಜ್ಞಾನ ಸಮಿತಿ(ಕೆಜೆವಿಎಸ್)ಕಾರ್ಯ ನಿರ್ವಹಿಸುತ್ತಿದೆ.

ಕರ್ನಾಟಕದಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಸಂಸ್ಥೆಗಳಿದ್ದರೂ ವಿಜ್ಞಾನ ಕಾರ್ಯಕ್ರಮಗಳು ತಲುಪದೇ ಇರುವ ಗ್ರಾಮಗಳು ಹಲವಿವೆ ಎಂದರೆ ಅತಿಶಯೋಕ್ತಿಯಲ್ಲ. ಜೊತೆಗೆ ಕೇವಲ ಸರ್ಕಾರದ ನೆರವನ್ನಷ್ಟೆ ನಿರೀಕ್ಷಿಸಿ ಕೂರದೇ ಸಮುದಾಯದ ನೆರವಿನಿಂದಲೂ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುವ ಹಾಗೂ ಕೆಲವು ಘಟನೆಗಳು ಸಂಭವಿಸಿದಾಗ ತಕ್ಷಣ ಪ್ರತಿಕ್ರಿಯಿಸುವ ಸಂಸ್ಥೆಗಳ ಅಗತ್ಯ ಇರುವುದನ್ನು ಮನಗಂಡು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯನ್ನು ಅಸ್ಥಿತ್ವಕ್ಕೆ ತರಲಾಗಿದೆ. ಸಂಸ್ಥೆ ಈವರೆಗೆ ನಡೆಸಿರುವ ಎಲ್ಲ ಕಾರ್ಯಕ್ರಮಗಳನ್ನು ಸಮುದಾಯದ ಹಾಗೂ ಸದಸ್ಯರ ನೆರವಿನಿಂದ ನಡೆಸಲಾಗಿರುತ್ತದೆ. ಈ ಸಂಸ್ಥೆಯಲ್ಲಿರುವ ಎಲ್ಲರೂ ಜನವಿಜ್ಞಾನ ಸಂಘಟನೆಗಳೊಂದಿಗೆ ಹಲವು ವರ್ಷಗಳ ಕಾಲ ಕೆಲಸ ಮಾಡಿರುತ್ತಾರೆ. ಜೊತೆಗೆ ಶಿಕ್ಷಣ ಇಲಾಖೆಯಲ್ಲಿಯೂ ಉನ್ನತ ಸ್ಥಾನದಲ್ಲಿ ಕೆಲಸ ಮಾಡಿರುತ್ತಾರೆ.

ಸಮಿತಿ ರಾಜ್ಯದ ೨೮ ಜಿಲ್ಲೆಗಳ ೬೦ ತಾಲೂಕುಗಳಲ್ಲಿ ಸುಮಾರು ೬೦೦ ಸದಸ್ಯರನ್ನು ಹೊಂದಿದೆ. ಸಮಿತಿಯ ಸದಸ್ಯರುಗಳಲ್ಲಿ ಹೆಚ್ಚಿನವರು ಶಿಕ್ಷಕರಾಗಿದ್ದರೂ ಇತರ ಕ್ಷೇತ್ರಗಳಿಂದಲೂ ಸಮಿತಿಗೆ ಸದಸ್ಯರಿದ್ದಾರೆ. ಅವರು ಕಾಲೇಜುಗಳು, ತಾಂತ್ರಿಕ ಕಾಲೆಜುಗಳು, ಎನ್.ಎಸ್.ಎಸ್ ಅಧಿಕಾರಿಗಳು, ವೈದ್ಯರು, ವಕೀಲರು, ಉಪನ್ಯಾಸಕರು, ವಿದ್ಯಾರ್ಥಿಗಳು, ಯುವಕರು ಹೀಗೆ ಸಮಾಜದ ವಿವಿಧ ಭಾಗಗಳನ್ನು ಪ್ರತಿನಿಧಿಸಿರುತ್ತಾರೆ. ಸಮಿತಿಯ ಸದಸ್ಯರು ಲೇಖಕರಾಗಿ, ಹಾಡುಗಾರರಾಗಿ, ಜನಪ್ರಿಯ ಉಪನ್ಯಾಸ ನೀಡುವವರಾಗಿ, ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಮಿತಿಯ ಸದಸ್ಯರಿಗೆ ರಾಜ್ಯದಾದ್ಯಂತ ನಡೆಯುವ ಚಟುವಟಿಕೆಗಳನ್ನು ಪರಿಚಯಿಸುವ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕೆಜೆವಿಎಸ್ ನ್ಯೂಸ್ ಎಂಬ ಮಾಸಿಕವನ್ನು ಪ್ರಕಟಿಸಲಾಗುತ್ತಿದೆ. ಇದು ಪ್ರತಿ ತಿಂಗಳೂ ಎಲ್ಲ ಸದಸ್ಯರನ್ನೂ ತಲುಪಿ ಅವರಲ್ಲಿ ಜಾಗೃತಿಯನ್ನುಂಟು ಮಾಡುತ್ತಿದೆ.

ಸಮಿತಿಯ ವತಿಯಿಂದ ಮುಂದಿನ ಎರಡು ತಿಂಗಳಲ್ಲಿ ಸುಮರು ಹತ್ತು ಪುಸ್ತಕಗಳನ್ನು ತರಲಾಗುತ್ತಿದೆ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಈವರೆಗೆ ಸಂಘಟಿಸಿರುವ ಕಾರ್ಯಕ್ರಮಗಳು:


ಶುಕ್ರ ಸಂಕ್ರಮ ರಾಜ್ಯ ಮಟ್ಟದ ಕಾರ್ಯಾಗಾರ: ಮಾರ್ಚಿ ೯-೧೦ ರಂದು ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಶಿಕ್ಷಕರು ಹಾಗೂ ಕಾರ್ಯಕರ್ತರಿಗೆ ರಾಜ್ಯಮಟ್ಟದ ಶುಕ್ರಸಂಕ್ರಮ ಕಾರ್ಯಾಗಾರ ವನ್ನು ಶ್ರವಣಬೆಳಗೊಳದಲ್ಲಿ ಸಂಘಟಿಸಲಾಗಿತ್ತು. ರಾಜ್ಯದ ೧೬ ಜಿಲ್ಲೆಗಳಿಂದ ೧೦೫ ಪ್ರತಿನಿಧಿಗಳು ಭಾಗವಹಿಸಿ ತರಬೇತಿ ಪಡೆದರು. ಪ್ರೊ.ಎಸ್.ವಿ.ಸುಬ್ರಮಣ್ಯಂ ಕಾರ್ಯಾಗಾರವನ್ನು ಉದ್ಘಾಟಿಸಿದರು.

ಶುಕ್ರ ಸಂಕ್ರಮ ವೀಕ್ಷಣೆ : ೨೦೧೨ರ ಜೂನ್ ೬ ರಂದು ಬೆಂಗಳೂರಿನ ಲಾಲ್ ಭಾಗ್ ನಲ್ಲಿ ಶುಕ್ರ ಸಂಕ್ರಮ ವೀಕ್ಷಣೆ ವ್ಯವಸ್ಥೆಯನ್ನು ಬೆಂಗಳೂರು ಅಸ್ಟ್ರನಾಮಿಕಲ್ ಸೊಸೈಟಿ ಇವರ ಸಹಯೋಗದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸಿದ್ದರು. ಇದೇ ರೀತಿಯಲ್ಲಿ ತುಮಕೂರು, ಹೊಸಪೇಟೆ, ಧಾರವಾಡ, ಹರಿಹರ, ಶಿವಮೊಗ್ಗ, ಹಾಸನ, ಹೊಳೆನರಸೀಪುರ, ಪಾಂಡವಪುರ ಮುಂತಾದ ಸ್ಥಳಗಳಲ್ಲಿಯೂ ವೀಕ್ಷಣಾ ಕಾರ್ಯಕ್ರಮವನ್ನು ನಡೆಸಲಾಗಿದೆ.

ಪವಾಡ ರಹಸ್ಯ ಬಯಲು ಕಾರ್ಯಕ್ರಮ: ೨೦೧೨ರ ಡಿಸೆಂಬರ್ ನಲ್ಲಿ ಬೆಂಗಳೂರು ನಗರದ ಯಲಹಂಕ ಸುತ್ತಮುತ್ತಲಿನ ೫ ಗ್ರಾಮಗಳ ಸ್ವಸಹಾಯ ಸಂಘದ ಸದಸ್ಯರಿಗೆ ಕಲ್ಪತರು ಗ್ರಾಮೀಣ ಬ್ಯಾಂಕ್ ನವರ ಸಹಯೋಗದಲ್ಲಿ ಹಾಗೂ ಟಿ.ದಾಸರಹಳ್ಳಿ ವ್ಯಾಪ್ತಿಯ ರುಕ್ಮಿಣಿನಗರದಲ್ಲಿ ಪವಾಡ ರಹಸ್ಯಬಯಲು ಕಾರ್ಯಕ್ರಮಗಳನ್ನು ನೀಡಲಾಗಿದೆ.

ವನ್ಯಜೀವಿ ಸಪ್ತಾಹದ ಅಂಗವಾಗಿ ಉಪನ್ಯಾಸ: ಬೆಂಗಳೂರಿನ ಹೊಸರಸ್ತೆಯಲ್ಲಿ, ಚಿಕ್ಕಮಗಳೂರು ಹಾಗೂ ಮಂಗಳೂರಿನಲ್ಲಿ ವನ್ಯಜೀವಿ ಸಪ್ತಾಯದ ಅಂಗವಾಗಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಉಪನ್ಯಾಸಗಳನ್ನು ನೀಡಿದೆ.

ಪ್ರಳಯ ಹಾಗೂ ವೈಜ್ಞಾನಿಕ ಚಿಂತನೆ ಉಪನ್ಯಾಸ: ದಿನಾಂಕ ೨೩.೧೨.೨೦೧೨ ರಂದು ದಾವಣಗೆರೆ ಜಿಲ್ಲೆ ಹರಪನಹಳ್ಳಿಯಲ್ಲಿ ಪ್ರಳಯ ಮತ್ತು ವೈಜ್ಞಾನಿಕ ಚಿಂತನೆಗೆ ಸಂಬಂದಿಸಿದ ವಿಚಾರ ಸಂಕಿರಣವನ್ನು ಸಂಘಟಿಸಲಾಗಿದೆ. ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲಸ್ವಾಮೀಜಿ ಭಾಗವಹಿಸಿದ್ದರು.

ಸಸಿ ನೆಡುವ ಕಾರ್ಯಕ್ರಮ: ೨೦೧೨ರ ಜುಲೈ ೧೨ ರಂದು ತುಮಕೂರು ಬಳಿಯ ಶೆಟ್ಟಿಹಳ್ಳಿಪಾಳ್ಯದಲ್ಲಿ ಎರ್ಪಡಿಸಲಾಗಿತ್ತು. ೨೫೦ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯ್ತು.

ಪ್ರಳಯ ಹಾಗೂ ಫಲ ಜ್ಯೋತಿಷ್ಯ ಕುರಿತ ವಿಚಾರ ಸಂಕಿರಣ: ದಿನಾಂಕ ೨೩.೧೨.೨೦೧೨ ರಂದು ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಪ್ರಳಯ ಹಾಗೂ ಫಲ ಜ್ಯೋತಿಷ ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಅಖಿಲ ಕರ್ನಾಟಕ ವಿಚಾರವಾದಿ ಸಂಘಟನೆಯ ಅಧ್ಯಕ್ಷರಾದ ಪ್ರೊ.ಎ.ಎಸ್.ನಟರಾಜ್ ಭಾಗವಹಿಸಿದ್ದರು.

ಮಕ್ಕಳಿಗಾಗಿ ಬೇಸಿಗೆ ವಿಜ್ಞಾನ ಶಿಬಿರ: ೨೦೧೨ ರ ಮೇ ಮೊದಲ ವಾರದಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಕ್ಕಳಿಗಾಗಿ ವಿಜ್ಞಾನ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಒಂದು ವಾರ ಕಾಲ ನಡೆದ ಈ ಶಿಬಿರದಲ್ಲಿ ೧೫೦ ಮಕ್ಕಳು ಭಾಗವಹಿಸಿದ್ದರು.

ವಿಜ್ಞಾನ ಸಂವಹನ ಕಾರ್ಯಾಗಾರ: ೨೦೧೨ರ ನವೆಂಬರ್ ೧೫ರಂದು ಧಾರವಾಡ ಗುರುಭವನದಲ್ಲಿ ಶಿಕ್ಷಕರಿಗಾಗಿ ವಿಜ್ಞಾನ ಸಂವಹನ ತರಬೇತಿಯನ್ನು ಏರ್ಪಡಿಸಲಾಗಿತ್ತು. ಶ್ರೀಅಬ್ದುಲ್ ರೆಹಮಾನ್ ಪಾಷ ತರಬೇತಿ ನೀಡಿದರು.

ಮಕ್ಕಳ ದಿನಾಚರಣೆ: ಹಾಸನ ಜಿಲ್ಲೆ, ಹೊಳೆ ನರಸೀಪುರದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಪರಿಸರ ಕುರಿತ ಸ್ಥಳದಲ್ಲೇ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉತ್ತಮ ಚಿತ್ರಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ನೀಡಲಾಯ್ತು.

ಹವಾಮಾನ ಬದಲಾವಣೆ ಕಾರ್ಯಾಗಾರ: ದಿನಾಂಕ ೨೯.೦೭.೨೦೧೨ ರಂದು ಮೈಸೂರು ಜಿಲ್ಲೆ, ಕೆ.ಆರ್.ನಗರದಲ್ಲಿ ಹವಾಮಾನ ಬದಲಾವಣೆ, ಪರಿಣಾಮಗಳು ಹಾಗೂ ಪರ್ಯಾಯಗಳು ಕುರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಬೆಂಗಳೂರಿನ ಗ್ರೀನ್ ಪವರ್ ಕ್ಲೈಮೇಟ್ ಸಂಸ್ಥೆಯ ಶ್ರೀ ಧನರಾಜ್ ಪರಿಣಿತರಾಗಿ ಆಗಮಿಸಿದ್ದರು.

ಪುಸ್ತಕ ಪ್ರಕಟಣೆ: ಪ್ರಳಯ ದ ಬಗ್ಗೆ ಜನರಿಗೆ ವಾಸ್ತವಾಂಶಗಳನ್ನು ವಿವರಿಸುವ ಪ್ರಳಯ ವಾಸ್ತವ ಎಂಬ ಕಿರು ಪುಸ್ತಕವನ್ನು ಪ್ರಕಟಿಸಲಾಗಿದೆ.

ಕೆಜೆವಿಎಸ್ ನ್ಯೂಸ್: ಸಮಿತಿಯ ಸದಸ್ಯರಿಗೆ ಸಮಿತಿಯ ಚಟುವಟಿಕೆಗಳನ್ನು ವಿವರಿಸುವ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಒದಗಿಸುವ ಕೆಜೆವಿಎಸ್ ನ್ಯೂಸ್ ಎಂಬ ಮಾಸಿಕವನ್ನು ಪ್ರಕಟಿಸಲಾಗುತ್ತಿದೆ.

ಶಿಕ್ಷಣ ಶಿಲ್ಪಿ: ಶಿಕ್ಷಕರು ಹಾಗೂ ಶಿಕ್ಷಣಾಸಕ್ತರನ್ನು ಗುರಿಯಾಗಿಟ್ಟುಕೊಂಡು ಶಿಕ್ಷಣ ಶಿಲ್ಪಿ ಎಂಬ ಶೈಕ್ಷಣಿಕ ಮಾಸಿಕವನ್ನು ೨೦೧೩ರ ಜನವರಿಯಿಂದ ಪ್ರಕಟಿಸಲಾಗುತ್ತಿದೆ. ವಿಜ್ಞಾನಕ್ಕೆ ಸಂಬಂಧಿಸಿದ ಹೆಚ್ಚಿನ ಲೇಖನಗಳನ್ನು ಈ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದೆ.

Tuesday, January 15, 2013

Ko.Chennabasappa


ಬಿಜಾಪುರದಲ್ಲಿ ಜರುಗುವ 79ನೆಯ

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ

ಕೋಣನೂರು ಚೆನ್ನಬಸಪ್ಪನವರು

(ಕೃಪೆ: ವಿಕಿಪೀಡಿಯಾ)


 ಪರಿಚಯ

ನಿವೃತ್ತ ನ್ಯಾಯಾಧಿಶರಾದ ಕೋ.ಚೆನ್ನಬಸಪ್ಪನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡುಗು ಸಮೀಪದ ಆಲೂರಿನಲ್ಲಿ. ತಂದೆ ವೀರಣ್ಣ. ತಾಯಿ ಬಸಮ್ಮ. ಕಾನಮಡುಗು ಹಳ್ಳಿಯಲ್ಲಿ  ಪ್ರೈಮರಿ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ. ನಂತರ ಪ್ರೌಢಶಾಲೆಗೆ ಬಳ್ಳಾರಿ, ಕಾಲೇಜು ವಿದ್ಯಾಭ್ಯಾಸ ಅನಂತಪುರದಲ್ಲಿ ನೆಡೆಯಿತು. ಆಗ ದೇಶಕ್ಕೆ ಹಬ್ಬಿದ್ದ  ಸ್ವಾತಂತ್ರ್ಯದ ಬಿಸಿ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಿದ್ಯಾರ್ಥಿ ಮುಖಂಡರಾಗಿ ಭಾಗಿಯಾಗಿ ಬಂಧನ, ಸೆರೆಮನೆವಾಸ ಅನುಭವಿಸಿದರು. ಬಿಡುಗಡೆಯ ನಂತರ ಬಿ.ಎ. ಪದವಿ, ಬೆಳಗಾವಿ ಕಾಲೇಜಿನಿಂದ ಲಾ ಪದವಿ. ಚರಿತ್ರೆ ಮತ್ತು ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಕೂಡ ಪಡೆದರು.

೧೯೪೬ರಲ್ಲಿ ಮುಂಬಯಿ ಹೈಕೋರ್ಟಿನಲ್ಲಿ ವಕೀಲರಾಗಿ ನೋಂದಣಿಗೊಂಡು, ಬಳ್ಳಾರಿ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲಿ ವೃತ್ತಿ ಆರಂಭ. ೧೯೬೫ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ನೇಮಕವಾದರು. ನಿವೃತ್ತಿಯ ನಂತರ ಪುನಃ ಕರ್ನಾಟಕ ಹೈಕೋರ್ಟಿನಲ್ಲಿ  ವಕೀಲಿ ವೃತ್ತಿ. ಹಲವಾರು ಕಾರ್ಮಿಕ ಸಂಘಗಳ, ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಅಧ್ಯಕ್ಷರ ಜವಾಬ್ದಾರಿ ನಿರ್ವಹಿಸಿದರು.

೧೯೭೧ರ ಸುಮಾರಿನಲ್ಲೆ ಅರವಿಂದಾಶ್ರಮದ ಒಡನಾಟ ಇರಿಸಿಕೊಂಡಿದ್ದರು. ಕರ್ನಾಟಕ ವಿಭಾಗದ ಅರವಿಂದಾಶ್ರಮ ಪ್ರಾರಂಭ ಮಾಡಿದರು. ಅಮೆರಿಕದಲ್ಲಿ ನಡೆದ ವೀರಶೈವ ವಾರ್ಷಿಕ ಅವೇಶನ, ಅರವಿಂದಾಶ್ರಮದ ಕಾರ‍್ಯಕ್ರಮಗಳಲ್ಲಿ ಪ್ರಮುಖ ಪಾತ್ರ.

ಸಾಹಿತ್ಯದ ಗೀಳು ಹಚ್ಚಿಕೊಂಡ ಇವರು ನಾಡಿನ ಪ್ರಮುಖ ಪತ್ರಿಕೆಗಳಿಗೆಲ್ಲಾ ಬರೆದ ಅಪಾರ ಬರಹ. ಕನ್ನಡಪ್ರಭ ಪತ್ರಿಕೆಯಲ್ಲಿ ನ್ಯಾಯಾಧಿಶರ ನೆನಪುಗಳು ಮತ್ತು ಪ್ರಜಾಮತ ವಾರಪತ್ರಿಕೆಯಲ್ಲಿ ನ್ಯಾಯಾಲಯದಲ್ಲಿ  ಸತ್ಯ ಕಥೆಗಳು ಪ್ರಕಟಿತ.

ಪ್ರಕಟಿತ ಕೃತಿಗಳೇ ಸುಮಾರು ೮೦ಕ್ಕೂ ಹೆಚ್ಚು. ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಮೊದಲಾದ ೫ ಕವನ ಸಂಕಲನಗಳು. ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಮುಂತಾದ ೬ ಕಥಾ ಸಂಕಲನಗಳು. ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಮೊದಲಾದ ೯ ಕಾದಂಬರಿಗಳು. ಶ್ರೀ ಅರವಿಂದರು, ಶ್ರೀ ಮಾತಾಜಿ, ಶ್ರೀ ಮೃತ್ಯುಂಜಯಸ್ವಾಮಿಗಳು ಮೊದಲಾದ ೮ ಜೀವನಚರಿತ್ರೆಗಳು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಗ್ರಂಥಗಳು. ರಕ್ಷಾಶತಕಂ, ಶ್ರೀ ಕುವೆಂಪು ಭಾಷಣಗಳು, ಬಿನ್ನವತ್ತಳೆಗಳು ಸಂಪಾದಿತ ಕೃತಿಗಳು.

ವೃತ್ತಿ
ನ್ಯಾಯವಾದಿಗಳಾಗಿ  ವೃತ್ತಿ ಪ್ರಾರಂಭಿಸಿದ ಚೆನ್ನಬಸಪ್ಪನವರು ನ್ಯಾಯಮೂರ್ತಿಗಳಾಗಿ ನಿವೃತ್ತರಾದರು.

ಕೃತಿಗಳು
* ಖಜಾನೆ
* ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ
* ರಕ್ತತರ್ಪಣ
* ಹಿಂದಿರುಗಿ ಬರಲಿಲ್ಲ
* ನ್ಯಾಯಾಲಯದ ಸತ್ಯಕಥೆಗಳು
* ಪ್ರಾಣಪಕ್ಷಿ
* ಹೃದಯ ನೈವೇದ್ಯ
* ದಿವಾನ್ ಬಹಾದ್ದೂರ್
* ಶ್ರೀ ಮೃತ್ಯುಂಜಯ ಸ್ವಾಮಿಗಳು
* ಶ್ರೀ ಅರವಿಂದರು
* ಶ್ರೀ ಅರವಿಂದರು ಮತ್ತು ಅವರ ಆಶ್ರಮ
* ಶ್ರೀ ರಾಮಕೃಷ್ಣ ಲೀಲಾ ನಾಟಕ
* ರಾಮಕೃಷ್ಣರ ದೃಷ್ಟಾಂತ ಕಥೆಗಳು
* ಬೆಳಕಿನೆಡೆಗೆ
* ನಮಗೆ ಬೇಕಾದ ಸಾಹಿತ್ಯ
* ನನ್ನ ಮನಸ್ಸು
* ನನ್ನ ನಂಬುಗೆ
* ಆ ಮುಖ ಈ ಮುಖ
* ಈ ರಾಜ್ಯದೊಡೆಯ ರೈತ
ಕಥಾ ಸಂಕಲನಗಳು
* ಗಡಿಪಾರು
* ನಮ್ಮೂರ ದೀಪ
* ಗಾಯಕನಿಲ್ಲದ ಸಂಗೀತ

ಕವನ ಸಂಕಲನಗಳು
* ಸ್ವಾತಂತ್ರ್ಯ ಮಹೋತ್ಸವ
* ಪ್ರಾಣಪಕ್ಷಿ
* ಜೀವತೀರ್ಥ

ಪುರಸ್ಕಾರ
* “ಖಜಾನೆಗೆ  ಭಾರತ ಸರಕಾರದ ನೂತನ ಅಕ್ಷರಸ್ಥರ ಸಾಹಿತ್ಯಸ್ಪರ್ಧೆಯಲ್ಲಿ ಬಹುಮಾನ ದೊರಕಿದೆ
* “ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಪುರಸ್ಕಾರ ಲಭಿಸಿದೆ.
* ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
* ಉಗ್ರಾಣ ಪ್ರಶಸ್ತಿ
* ಸ.ಸ.ಮಾಳವಾಡ ಪ್ರಶಸ್ತಿ
* ಚಿಂತನಶ್ರೀ ಪ್ರಶಸ್ತಿ
* ಸಂ.ಶಿ. ಭೂಸನೂರ ಮಠ ಪ್ರಶಸ್ತಿ
* ಕನ್ನಡಶ್ರೀ ಪ್ರಶಸ್ತಿ
* ವಿಶ್ವಮಾನವ ಪ್ರಶಸ್ತಿ ಮುಂತಾದವು

Wednesday, January 9, 2013

ಮಹಿಳಾ ಅವಿಷ್ಕಾರಗಳು

"ನಾವೂ ಸಮರ್ಥರು; ನಾವೂಅವಿಷ್ಕರಿಸಬಲ್ಲೆವು"
ಸಿಬಿಲ್ಲಾ ಮಾಸ್ಟರ್ಸ್

         ಕಳೆದ ಕೆಲವು ಶತಮಾನಗಳಲ್ಲಿ ಅತ್ಯಂತ ಪ್ರಸಿದ್ಧ ಆವಿಷ್ಕಾರಗಳ ಪಟ್ಟಿ ಮಾಡಿದಾಗ, ಅದರಲ್ಲಿ ಮಹಿಳೆಯರ ಪಾಲು ಅತ್ಯಂತ ಕಡಿಮೆ ಎಂಬುದು ಕಂಡುಬರುತ್ತದೆ. 20 ನೇ ಶತಮಾನದ ಕೊನೆಯಲ್ಲಿ, ಎಲ್ಲಾ ಪೇಟೆಂಟ್ ಗಳ ಪೈಕಿ ಕೇವಲ 10 ಪ್ರತಿಶತ ಮಾತ್ರ ಸ್ತ್ರೀ ಸಂಶೋಧಕರ ಹೆಸರಿನಲ್ಲಿ ದಾಖಲಾಗಿದ್ದವು.
                ಪುರುಷ ಹಾಗೂ ಮಹಿಳೆಯರ ಅವಿಷ್ಕಾರಗಳಲ್ಲಿ ಈ ವ್ಯತ್ಯಾಸ ಏಕೆ?  ಇದು ಮಹಿಳೆಯರ ಜಾಣ್ಮೆ ಅಥವಾ ಸೃಜನಶೀಲ ಮನೋಭಾವದ ಕೊರತೆಯೇ?
ಇರಲಾರದು. ಕಳೆದ ಶತಮಾನಗಳಲ್ಲಿ, ತಮ್ಮ ಅವಿಷ್ಕಾರಗಳ ಕ್ರೆಡಿಟ್ ಪಡೆಯುವಲ್ಲಿ ಮಹಿಳೆಯರು ಅನುಭವಿಸಿದ ಅಡಚಣೆಗಳೂ ಮೇಲ್ನೋಟಕ್ಕೆ ತೋರುವ ಈ ಅಸಮತೋಲನಕ್ಕೆ ಕಾರಣವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.

ಸಿಬಿಲ್ಲಾ ಮಾಸ್ಟರ್ಸ್, ಎಂಬ ಅಮೆರಿಕನ್ ಮಹಿಳೆ, ಮೆಕ್ಕೆ ಜೋಳವನ್ನು ಬಳಸಿ ಹೊಸ ಬಗೆಯ ಖಾದ್ಯಪದಾರ್ಥವೊಂದನ್ನು ತಯಾರಿಸಿದಳು. ಅದಕ್ಕಾಗಿ ಯಂತ್ರವೊಂದನ್ನು ಆಕೆಯೇ ರೂಪಿಸಿದ್ದಳು. ಅವಳ ಆ ಸಾಧನಕ್ಕಾಗಿ ಪೇಟೆಂಟ್ ಪಡೆಯಲು ಸಿಬಿಲ್ಲಾ ೧೭೧೨ರಲ್ಲಿ ಇಂಗ್ಲೆಂಡ್ ಗೆ ಹೋದಳು. ಆದರೆ ಆ ಸಮಯದಲ್ಲಿ ಮಹಿಳೆಯರು ಯಾವುದೇ ಆಸ್ತಿಯನ್ನೂ ಹೊಂದಲು ಅವಕಾಶವಿರಲಿಲ್ಲ. ಬೌದ್ಧಿಕ ಆಸ್ತಿಯನ್ನು ಸಹ.  ಆ ಸಮಯದಲ್ಲಿ ಕಾನೂನು ಪ್ರಕಾರ, ಮಹಿಳೆಯ ಆಸ್ತಿಪಾಸ್ತಿ, ಅವಳ ತಂದೆ ಅಥವಾ ಗಂಡನ ಅಧೀನದಕ್ಕೆ ಸೇರಿದ್ದೆಂದು ಪರಿಗಣಿಸಲಾಗುತ್ತಿತ್ತು. 1715ರಲ್ಲಿ, ಸಿಬಿಲ್ಲಾ ಮಾಸ್ಟರ್ಸ್ ಉತ್ಪನ್ನಕ್ಕೆ ಸ್ವಾಮ್ಯದ ಹಕ್ಕುಪತ್ರವನ್ನೇನೋ ನೀಡಲಾಯಿತು. ಆದರೆ ಡಾಕ್ಯುಮೆಂಟಲ್ಲಿ ಹೆಸರು ಆಕೆಯ ಪತಿ  ಥಾಮಸ್ ನದಾಗಿತ್ತು!
               
ಮೇರಿ ಕೀಯಸ್
         ತಮ್ಮ ಆವಿಷ್ಕಾರಗಾಳಿಗಾಗಿ ಪೇಟೆಂಟ್ ಪಡೆದುಕೊಳ್ಳಲು ಅನೇಕ ಶತಮಾನಗಳಿಂದ ಆಸ್ತಿಪಾಸ್ತಿ ಕಾನೂನುಗಳು ಮಹಿಳೆಯರಿಗೆ  ತಡೆಯೊಡ್ಡಿದ್ದವು. ಮಹಿಳೆಯರು ತಾಂತ್ರಿಕ ಶಿಕ್ಷಣ ಪಡೆಯುವುದು, ಅವರ ಚತುರ ಕಲ್ಪನೆಯನ್ನು ನೈಜ ಉತ್ಪನ್ನವಾಗಿ ಪರಿವರ್ತಿಸುವುದು, ಸುಲಭವಾಗಿರಲಿಲ್ಲ. ತಮ್ಮ ಕಲ್ಪನೆಯನ್ನು ಕಾರ್ಯ ರೂಪಕ್ಕೆ ತರಬೇಕೆಂಬ ಅಭಿಲಾಷೆಯಿಂದ ಪುರುಷರ ಸಹಾಯ ಕೋರಿದಾಗ ಅನೇಕರು ಪೂರ್ವಾಗ್ರಹ ಮತ್ತು ಮೂದಲಿಕೆಯನ್ನು ಎದುರಿಸಬೇಕಾಯಿತು. ಹಾಗಾಗಿ ಕೆಲವು ಮಹಿಳೆಯರು ಕೇವಲ ಗೃಹಿಣಿಯರಾಗಿ, ಮನೆಯೊಳಗಿನ ಜೀವನ ಶೈಲಿ ಸುಧಾರಿಸುವಂಥ ಅವಿಷ್ಕಾರಗಳನ್ನು ಮಾಡಿದರು. ಮಹಿಳೆಯರು ಮನೆಯೊಳಗಿನ ಕೆಲಸಗಳಿಗಷ್ಟೇ ಲಾಯಕ್ಕು ಮತ್ತು ಪ್ರಶಂಸೆಗೆ ಅನರ್ಹರು ಎಂಬ ತಿರಸ್ಕಾರಕ್ಕೂ ಪಾತ್ರರಾಗಬೇಕಾಯಿತು.


ಮೇರಿ ಕೀಯಸ್, ತನ್ನ ಹೆಸರಿನಲ್ಲಿ ಪೇಟೆಂಟ್ ಪಡೆದ ವಿಶ್ವದ ಮೊದಲ ಮಹಿಳೆಯಾಗಿದ್ದಾಳೆ. 1809 ರಲ್ಲಿ, ಅವಳು ಒಣಹುಲ್ಲಿನಿಂದ ನೇಯುವ ಹ್ಯಾಟ್ ಗಳನ್ನು ಅಭಿವೃದ್ಧಿಪಡಿಸಿಳು. ಇದರಿಂದ ಇಂಗ್ಲೆಂಡಿನ  ಜನತೆಗೆ ಕಡಿಮೆ ಬೆಲೆಯ ಗುಣಮಟ್ಟದ ಹ್ಯಾಟ್ ದೊರಕುವಂತಾಯಿತು, ವರದಾನವೆನಿಸಿದ ತನ್ನ ಆವಿಷ್ಕಾರಕ್ಕಾಗಿ ಸತತ ಹೊರಾಟ ಮಾಡಿ ಸ್ವಾಮ್ಯತೆಯ ಹಕ್ಕುಗಳನ್ನು ಪಡೆದುಕೊಂಡಳು. ಆ ಮೂಲಕ ಕೀಯಸ್, ಬೌದ್ಧಿಕ ವಿಚಾರಗಳಿಗಾಗಿ ಕ್ರೆಡಿಟ್ ತೆಗೆದುಕೊಳ್ಳಲು ಸ್ತ್ರೀ ಸಂಶೋಧಕರಿಗೆ ದಾರಿ ಮಾಡಿದಳು. ಈ ಲೇಖನದಲ್ಲಿ, ಮಹಿಳೆಯರು ಕಂಡುಹಿಡಿದ 10 ಅವಿಷ್ಕಾರಗಳನ್ನು ಸ್ಮರಿಸಿಕೊಳ್ಳೋಣ ಹಾಗೂ ಆ ಮೂಲಕ ಅವರ ಅವಿಷ್ಕಾರಗಳಿಗಾಗಿ ಅವರಿಗೆ ನಮ್ಮ ನಮನ ಸಲ್ಲಿಸೋಣ.­­­­

1. ದುಂಡು ಗರಗಸ

18 ನೇ ಶತಮಾನದಲ್ಲಿಶೇಕರ್ಸ್ ಎಂಬ ಧಾರ್ಮಿಕ ಪಂಥ ಹೊರಹೊಮ್ಮಿತು. ಈ ಶೇಕರ್ಸ್ ಜನಾಂಗದವರು ಲಿಂಗ ಭೇದವಿಲ್ಲದ, ಕಠಿಣ ಶ್ರಮದ ದುಡಿಮೆ ಮಾಡುವವರಾಗಿದ್ದರು. ತಬಿತಾ ಬ್ಯಾಬಿಟ್  (1784–1853) ಎಂಬ ಮಹಿಳೆ ಮ್ಯಾಸಚೂಸೆಟ್ಸ್ ನಗರದ ಶೇಕರ್ ಸಮುದಾಯದವಳು ಮತ್ತು ಅವಳ ಸಹಚರರು ನೇಕಾರಿಕೆ ಹಾಗೂ ಬಡಗಿ ವೃತ್ತಿಗಳಲ್ಲಿ ಹೆಚ್ಚು ತೊಡಗಿಸಿಕೊಂಡವರಾಗಿದ್ದರು. 

ದುಂಡು ಗರಗಸ
ಪುರುಷರು ಮರದ ತೊಲೆಗಳನ್ನು ಕತ್ತರಿಸಲು ಪಿಟ್ ಗರಗಸವನ್ನು ಬಳಸುವುದನ್ನು ಅವಳು ಗಮನಿಸಿದ್ದಳು. ಆ  ಗರಗಸವು ಎರಡು ಹಿಡಿಕೆಗಳನ್ನು ಹೊಂದಿದ್ದು ಇಬ್ಬರು ಪುರುಷರು ಇದನ್ನು ಎರಡೂ ಬದಿಗಳಿಂದ, ಹಿಂದಕ್ಕೆ ಮತ್ತು ಮುಂದಕ್ಕೆ ಎಳೆಯುವ ಮೂಲಕ ಕತ್ತರಿಸುತ್ತಿದ್ದರು. ಗರಗಸವನ್ನು ಎರಡೂ ರೀತಿಯಲ್ಲಿ ಎಳೆದರೂ, ಇದು ಕೇವಲ ಮುಂದೆ ಎಳೆದ ಸಂದರ್ಭದಲ್ಲಿ ಮಾತ್ರ  ಕತ್ತರಿಸಿ; ಹಿಂಬದಿಯ ಚಲನೆಯಲ್ಲಿ ನಿಷ್ಪ್ರಯೋಜಕವಾಗಿತ್ತು. ಬ್ಯಾಬಿಟ್ ಗೆ, ಶಕ್ತಿಯು ವ್ಯರ್ಥವಾಗುತ್ತಿದೆ ಅನಿಸಿತು, ಆದ್ದರಿಂದ ಅವಳು ವೃತ್ತಾಕಾರದ ಗರಗಸದ ಮಾದರಿಯನ್ನು ಸೃಷ್ಟಿಸಿದಳು. ಈ ಗರಗಸವನ್ನು ಸಾಮಿಲ್ ಗಳಲ್ಲಿ ಬಳಸಲಾಯಿತು. ತಿರುಗುವ ಚಕ್ರಕ್ಕೆ ಒಂದು ವೃತ್ತಾಕಾರದ ಬ್ಲೇಡ್ ಜೋಡಿಸಿ ತಯಾರಿಸಿದ ಈ ದುಂಡು ಗರಗಸ ಪ್ರತಿ ಚಲನೆಯಲ್ಲೂ ಕತ್ತರಿಸಬಲ್ಲದಾಗಿತ್ತು.

2. ದ್ರವ ಕಾಗದ
 ನೆಸ್ಮಿತ್ ಗ್ರಹಾಂ
ಬೆಟ್ಟೆ ನೆಸ್ಮಿತ್ ಗ್ರಹಾಂ (೧೯೨೪-೧೯೮೦) ಉತ್ತಮ ಬೆರಳಚ್ಚುಗಾರಳಾಗಿರಲಿಲ್ಲ. ಪ್ರೌಢಶಾಲಾ ಶಾಲೆಯಿಂದ ಹೊರಬಿದ್ದ ಅವಳು ತನ್ನ ಪ್ರತಿಭೆಯ ಮೂಲಕ, ಟೆಕ್ಸಾಸ್ ಬ್ಯಾಂಕ್ ಮತ್ತು ಟ್ರಸ್ಟ್ ಮಂಡಳಿಯ ಅಧ್ಯಕ್ಷರ ಕಾರ್ಯ ನಿರ್ವಾಹಕ ಕಾರ್ಯದರ್ಶಿಯಾಗುವವರೆಗೂ ಬೆಳೆದಳು. ಅದು 1950, ಮತ್ತು ವಿದ್ಯುತ್ ಬೆರಳಚ್ಚುಯಂತ್ರವು ಆಗತಾನೇ ಪರಿಚಯಿಸಲ್ಪಟ್ಟತ್ತು. ಟೈಪಿಂಗ್ ನಲ್ಲಿ ಏನಾದರೂ ತಪ್ಪು, ಒಂದೇ ಒಂದು ಸಣ್ಣ ತಪ್ಪಾಗಿದ್ದರೂ,  ಬೆರಳಚ್ಚುಗಾರರು ಇಡೀ ಪುಟವನ್ನು ಮತ್ತೊಮ್ಮೆ ಟೈಪ್ ಮಾಡಬೇಕಿತ್ತು.
ಒಂದು ದಿನ, ಬ್ಯಾಂಕ್ ಒಂದರ ಮುಂಭಾಗದಲ್ಲಿ ಕೆಲಸಗಾರರು ‘ನಾಳೆ ರಜಾ’ ಎಂಬ ಸೂಚನಾ ಫಲಕ ಬರೆಯುತ್ತಿದ್ದುದನ್ನು  ಗ್ರಹಾಂ ವೀಕ್ಷಿಸಿದಳು. ಅವರು ತಪ್ಪುಗಳನ್ನು ಮಾಡಿದಾಗ, ಮುಚ್ಚಲು ಬಣ್ಣದ ಇನ್ನೊಂದು ಪದರವನ್ನು ಹಚ್ಚುವುದನ್ನು ಗಮನಿಸಿದಳು; ತಾನು ಟೈಪಿಂಗ್ ನಲ್ಲಿ ಆಗುವ ಪ್ರಮಾದಗಳಿಗೆ ಆ ಕಲ್ಪನೆಯನ್ನು ಅನ್ವಯಿಸಬಹುದು ಎಂದು ಊಹಿಸಿದಳು. ಬ್ಲೆಂಡರ್ ಬಳಸಿಕೊಂಡು, ತಮ್ಮ ಕಂಪನಿಯ ಕಾಗದ ಪತ್ರಗಳಿಗೆ ಹೊಂದುವಂತಹ ನೀರು ಆಧಾರಿತ ಮಿಶ್ರಣವನ್ನು ಗ್ರಹಾಂ ತಯಾರಿಸಿಕೊಡಳು. ಅದರಿಂದ ಉತ್ತಮ ಬ್ರಷ್ ಬಳಸಿ, ತಕ್ಷಣವೇ ತನ್ನ ದೋಷಗಳನ್ನು ಸರಿಪಡಿಸಲು ಸಾಧ್ಯವಾಯಿತು. ಶೀಘ್ರದಲ್ಲೇ ಇತರ ಕಾರ್ಯದರ್ಶಿಗಳು ಗ್ರಹಾಂಳ ಮಿಶ್ರಣ ಬಳಸಲು ಆರಂಭಿಸಿದರು. ಈ ಉತ್ಪಾದನೆಯ ಬಗ್ಗೆ ಪ್ರಶಂಸಿಸಲಾರಂಭಿಸಿದರು.
ಅವಳ ಅಡುಗೆಮನೆಯಲ್ಲೇ ತನ್ನ ಮಗ ಮೈಕೇಲ್ ನೊಂದಿಗೆ ಈ ಮಿಶ್ರಣದ ಉತ್ಪಾದನೆ ಮಾಡಿದಳು. ಗ್ರಹಾಂ ಈ ಉತ್ಪನ್ನಕ್ಕೆ  ‘ಮಿಸ್ಟೇಕ್ ಔಟ್’ ಎಂದು ಕರೆದಳು ಹಾಗೂ ವಿತರಿಸಲು ಹೆಚ್ಚಿನ ಸಮಯ ಕಳೆದಳು. ಇದರಿಂದಾಗಿ ಆಕೆ ತನ್ನ ಕೆಲಸದಿಂದ ವಜಾ ಆಗಬೇಕಾಯಿತು. ಆದರೆ ತನ್ನ ನಿರುದ್ಯೋಗದ ನಡುವೆಯೂ ಆಕೆ ತನ್ನ ಉತ್ಪನ್ನಕ್ಕೆ  ‘ದ್ರವ ಪೇಪರ್’ ಎಂದು ಮರುಹೆಸರಿಸಿ,  1958ರಲ್ಲಿ ಪೇಟೆಂಟ್ ಪಡೆದುಕೊಂಡಳು.
ಇಂದಿನ ಕಚೇರಿಗಳಲ್ಲಿ ಬೆರಳಚ್ಚು ಯಂತ್ರಗಳು ಹೋಗಿವೆ. ಕಂಪ್ಯೂಟರ್ ಗಳು ಬಂದಿವೆ. ಆದರೂ, ಎಲ್ಲಾ ಕಚೇರಿಗಳಲ್ಲೂ  ಬಿಳಿ ತಿದ್ದುಪಡಿ ದ್ರವದ ಒಂದು ಅಥವಾ ಎರಡು ಬಾಟಲ್ ಗಳು ಇದ್ದೇ ಇರುತ್ತವೆ. ಅದರ ಸೃಷ್ಟಿಕರ್ತೆ ಬೆಟ್ಟೆ ನೆಸ್ಮಿತ್ ಗ್ರಹಾಂ.
  
3. ಕಾರಿನ ವೈಪರ್
ಮೇರಿ ಆಂಡರ್ಸನ್

20ನೇ ಶತಮಾನದ ಆರಂಭದಲ್ಲಿಮೇರಿ ಆಂಡರ್ಸನ್ (1866–1953) ಮೊದಲ ಬಾರಿಗೆ ನ್ಯೂಯಾರ್ಕ್ ನಗರಕ್ಕೆ ಹೋದಳು. ಇಂದಿನಂತೆ ಆಗ ಕಾರ್ ಗಳ ಸಂಖ್ಯೆ ಹೆಚ್ಚಿರಲಿಲ್ಲ. ಅವಳ ಪ್ರವಾಸದ ಸಮಯದಲ್ಲಿಆಂಡರ್ಸನ್ ಹಿಮಾವೃತ ನಗರದ ಮೂಲಕ ಒಂದು ಟ್ರಾಮ್ ತೆಗೆದುಕೊಂಡು ಸಂಚರಿಸಿದಳು. ಟ್ರಾಮ್ ಚಾಲಕ ತನ್ನ ಮುಂದಿನ ಕಿಟಕಿಯ ಹಿಮವನ್ನು ಸರಿಸಲು ವಾಹನವನ್ನು ಪ್ರತಿ ಕೆಲವು ನಿಮಿಷಗಳಿಗೊಮ್ಮೆ ನಿಲ್ಲಿಸಬೇಕಾಗುವುದನ್ನು ಅವಳು ಗಮನಿಸಿದಳು. ಆ ಸಮಯದಲ್ಲಿ, ಎಲ್ಲಾ ಚಾಲಕಗರೂ ಹಾಗೇ ಮಾಡುತ್ತಿದ್ದರು; ಮಳೆ ಮತ್ತು ಹಿಮಗಳಿಂದಾಗಿ ಮುಂದಿನ ದೃಶ್ಯ ಸರಿಯಾಗಿ ಗೋಚರವಾಗುತ್ತಿರಲಿಲ್ಲ. ಇವು ವಾಹನ ಚಾಲಕರು ಎದುರಿಸಲೇ ಬೇಕಾದ ಅನಿವಾರ್ಯ ಸಮಸ್ಯೆಗಳೆಂದು ಭಾವಿಸಲಾಗಿತ್ತು.
 ಮೇರಿ ಮನೆಗೆ ಹಿಂದಿರುಗಿದವಳೇ, ಒಂದು ಹ್ಯಾಂಡಲ್ ಮತ್ತು ಸ್ಪಿಂಡಲ್ ಗಳನ್ನು ಕಸಪೊರಕೆಯೊಂದಕ್ಕೆ  ಜೋಡಿಸಿ ಪ್ರಯೋಗ ಮಾಡಿದಳು. ವಾಹನದ ಕಿಟಕಿಗೆ ಬಳಸಿ ನೋಡಿದಳು. ಚಾಲಕ ಗಾಜನ್ನು ತೆರವುಗೊಳಿಸಲು ಅಗತ್ಯವಿದ್ದಾಗ, ಅವನು ಕೇವಲ ಹ್ಯಾಂಡಲನ್ನು ಎಳೆದರೆ ಸಾಕಿತ್ತು. ಅದರ ರಬ್ಬರ್ ಬ್ಲೇಡ್, ಗಾಜಿನ ಮೇಲ್ಮೈ ಯನ್ನು ಒರೆಸಿ ಸ್ವಚ್ಚ ಗೊಳಿಸುತ್ತಿತ್ತು.
ಆಂಡರ್ಸನ್ 1903 ರಲ್ಲಿ ತನ್ನ ಸಾಧನಕ್ಕೆ ಪೇಟೆಂಟ್ ಪಡೆದಳು; ಇಂದು ವಿಶ್ವದ ಕೋಟ್ಯಾಂತರ  ಕಾರುಗಳು ಮೇರಿ ಆಂಡರ್ಸನ್ ಆವಿಷ್ಕಾರವಾದ ವೈಪರ್ ನ್ನು ಅಳವಡಿಸಿಕೊಂಡಿವೆ.

  
4. ಚೌಕತಳದ ಕಾಗದದ ಚೀಲ
ಮಾರ್ಗರೇಟ್ ನೈಟ್ (1889-1914) ಕಾಗದದ ಚೀಲ ಆವಿಷ್ಕಾರ ಮಾಡಲಿಲ್ಲ; ಆದರೆ ಆರಂಭದಲ್ಲಿ ಬಳಕೆಗೆ ಬಂದ ಪೇಪರ್ ಚೀಲಗಳು  ಸಮಾಗ್ರಿಗಳನ್ನು ಒಯ್ಯಲು ಉಪಯುಕ್ತವಾಗಿರಲಿಲ್ಲ. ಅವುಗಳನ್ನು ಹೆಚ್ಚೆಂದರೆ ದೊಡ್ಡ ಲಕೋಟೆಗಳಂತೆ ಬಳಸಬಹುದಾಗಿತ್ತು. ಇಂದಿನಂತೆ ಕಿರಾಣಿ ಅಂಗಡಿಯ ಬಳಕೆಗೆ ಅಂದಿನ ಕಾಗದದ ಚೀಲಗಳು ಸೂಕ್ತವಾಗಿರಲಿಲ್ಲ. ಅವುಗಳ ಸ್ವರೂಪವನ್ನು ಬದಲಿಸಿದ ಮಾರ್ಗರೇಟ್ ನೈಟ್ ಗೆ ನಾವು ಧನ್ಯವಾದ ಹೇಳಬೇಕು. ಪೇಪರ್ ಬ್ಯಾಗುಗಳ ತಳ ಭಾಗ ಚದರಕಾರದಲ್ಲಿ ಇರಬೇಕು ಎಂದು  ನೈಟ್ ಅರಿತುಕೊಂಡಳು; ಈ ರೀತಿಯಲ್ಲಿ ತೂಕವು ತಳಭಾಗದಲ್ಲಿ ಸಮನಾಗಿ ಹಂಚಿಕೆಯಾದರೆ, ಚೀಲದಲ್ಲಿ ಹೆಚ್ಚು ವಸ್ತುಗಳನ್ನು ಸಾಗಿಸಲು ಸಾಧ್ಯ ಎಂದು ಊಹಿಸಿದಳು.
ಮಾರ್ಗರೇಟ್ ನೈಟ್
  
1870ರಲ್ಲಿ, ಅವಳು ಕಾಗದವನ್ನು ಕತ್ತರಿಸಿ. ಮಡಿಸಿ, ಅಂಟಿಸಿ ಚದರ ಆಕಾರದ ತಳ ಭಾಗದ ಚೀಲಗಳನ್ನು ತಯಾರಿಸುವ ಮರದ ಯಂತ್ರ ನಿರ್ಮಿಸಿದಳು. ಇಂಥ ಕಬ್ಬಿಣದ ಯಂತ್ರದ ಮೂಲರೂಪ ನಿರ್ಮಿಸಿ ತನ್ನ ಹಕ್ಕುಸ್ವಾಮ್ಯ ಪಡೆಯಬೇಕೆಂದು ಪ್ರಯತ್ನಿಸುತ್ತಿದ್ದಳು.  ಅಷ್ಟರಲ್ಲೇ, ತನ್ನ ವಿನ್ಯಾಸವು, ಕೆಲವು ತಿಂಗಳ ಹಿಂದೆ ತನ್ನ ಮರದ ಯಂತ್ರವನ್ನು ನೋಡಿದ್ದ ಚಾರ್ಲ್ಸ್ ಅನ್ನಾನ್ ಎಂಬ ಹೆಸರಿನ ವ್ಯಕ್ತಿಯಿಂದ ಕದಿಯಲ್ಪಟ್ಟಿದೆ ಎಂದು ತಿಳಿಯಿತು. ಚಾರ್ಲ್ಸ್ ಅನ್ನಾನ್ ವಿರುದ್ಧ ಹಕ್ಕು ಸ್ವಾಮ್ಯಕ್ಕಾಗಿ ಮಾರ್ಗರೇಟ್ ನೈಟ್ ದಾವೆ ಹುಡಿದಳು. ಮಹಿಳೆಯೊಬ್ಬಳು ಇಂತಹ ಸಂಕೀರ್ಣ ಯಂತ್ರ ಅಭಿವೃದ್ಧಿ ಪಡಿಸಲು ಸಾಧ್ಯವೇ ಇಲ್ಲ ಎಂದು ವಾದಿಸಿದ ಅನ್ನಾನ್. ನೈಟ್ ತನ್ನ ಟಿಪ್ಪಣಿಗಳು ಮತ್ತು ರೇಖಾಚಿತ್ರಗಳನ್ನು ಸಾಕ್ಷಿಯಾಗಿ ಬಳಸಿ ಆ ಯಂತ್ರದ ಅವಿಷ್ಕಾರ ತನ್ನದೇ ಎಂದು ಸಾಬೀತು ಮಾಡಿದಳು. ಮತ್ತು 1871 ರಲ್ಲಿ ಅವಳು ತನ್ನ ಸಾಧನಕ್ಕೆ ಪೇಟೆಂಟ್ ಪಡೆದು ಕೊಂಡಳು.

5. ಕಂಪೈಲರ್ ಮತ್ತು COBOL ಕಂಪ್ಯೂಟರ್ ಭಾಷೆ

ಗ್ರೇಸ್ ಮರ್ರಿ ಹಾಪರ್
ನಾವು ಕಂಪ್ಯೂಟರ್ ಆಧುನಿಕತೆ ಬಗ್ಗೆ ಯೋಚನೆ ಮಾಡಿದರೆ, ನಾವು ಚಾರ್ಲ್ಸ್ ಬ್ಯಾಬೇಜ್, ಅಲನ್ ಟ್ಯೂರಿಂಗ್, ಬಿಲ್ ಗೇಟ್ಸ್ ಮುಂತಾದ ಪುರುಷರ ಬಗ್ಗೆಯೇ  ಯೋಚಿಸುತ್ತೇವೆ. ಆದರೆ ಅಡ್ಮಿರಲ್ ಗ್ರೇಸ್ ಮರ್ರಿ ಹಾಪರ್ (1906-1992) ಕೂಡಾ ಈ ಸಾಲಿನಲ್ಲಿ ಪ್ರಮುಖ ಸ್ಥಾನಕ್ಕೆ ಅರ್ಹಳಾಗಿದ್ದಾಳೆ.
 ಅಡ್ಮಿರಲ್ ಹಾಪರ್ 1943 ರಲ್ಲಿ ಮಿಲಿಟರಿ ಸೇರಿಕೊಂಡು, ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದ್ದ ಮೊದಲ ಬೃಹತ್ ಪ್ರಮಾಣದ ಕಂಪ್ಯೂಟರ್ ಜೊತೆ ಕೆಲಸನಿರ್ವಹಿಸಿದಳು. ಮರ್ರಿ ಹಾಪರ್ ಈ ಕಂಪ್ಯೂಟರ್ ಬಳಸಿದ ಮೂರನೇ ವ್ಯಕ್ತಿ ಮತ್ತು ನಂತರ ಈ ಕಂಪ್ಯೂಟರ್ ಬಳಸುವ ಮಾರ್ಗಗಳನ್ನು, ಕಾರ್ಯಾಚರಣೆಗಳನ್ನು ವಿವರವಾಗಿ  ಬರೆದಳು. 1950 ರಲ್ಲಿ, ಅಡ್ಮಿರಲ್ ಹಾಪರ್ ಇಂಗ್ಲೀಷ್ ಆಜ್ಞೆಗಳನ್ನು ಕಂಪ್ಯೂಟರ್ ಕೋಡ್ ಆಗಿ ಭಾಷಾಂತರಿಸುವ ಕಂಪೈಲರ್ ಕಂಡುಹಿಡಿದಳು. ಈ ಸಾಧನದಿಂದ ಪ್ರೋಗ್ರಾಮರಗಳು ಸುಲಭವಾಗಿ ಮತ್ತು ಕಡಿಮೆ ದೋಷಗಳೊಂದಿಗೆ ಕೋಡ್ ರಚಿಸಲು ಸಾಧ್ಯವಾಯಿತು. ಹಾರುವ ಎರಡನೇ ಕಂಪೈಲರ್, ಫ್ಲೋ-ಮ್ಯಾಟಿಕ್, ವಾಣಿಜ್ಯಿಕವಾಗಿ ಲಭ್ಯವಿರುವ ಮೊದಲ ಕಂಪ್ಯೂಟರ್ ಗಳು ಯಾವ ಪ್ರೋಗ್ರಾಂ UNIVAC I ಮತ್ತು II, ಬಳಸಲಾಗುತ್ತಿತ್ತು. ಅಡ್ಮಿರಲ್ ಹಾಪರ್ ಸಾಮಾನ್ಯ ವ್ಯಾಪಾರಕ್ಕೆ ಬಳಕೆಯಾಗುತ್ತಿದ್ದ, ಮೊದಲ ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆ COBOL ಅಭಿವೃದ್ಧಿಯಲ್ಲೂ ಪಾಲ್ಗೊಂಡಳು. ಅನೇಕ ಪ್ರಶಸ್ತಿಗಳೂ, ಅಲ್ಲದೇ, ಅಮೇರಿಕಾದ ಯುದ್ಧನೌಕೆಗೆ ಅಡ್ಮಿರಲ್ ಹಾಪರ್ ಹೆಸರನ್ನು ನೀಡಿ ಗೌರವವಿಸಲಾಗಿದೆ.
-ಶಶಿಧರ ಸೂರ್ಯ
(ಮಾಹಿತಿ ಸಂಗ್ರಹಣೆ :ಇಂಟರ್ನೆಟ್ ಮೂಲಗಳಿಂದ)                                    

ಶಿಕ್ಷಣ ಶಿಲ್ಪಿ ಶೈಕ್ಷಣಿಕ ಮಾಸಪತ್ರಿಕೆ

ಪತ್ರಿಕೆ ಪ್ರಾರಂಭೋತ್ಸವ ಹಾಗೂ
ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ
ದಿನಾಂಕ: ೧೬ ಮತ್ತು ೧೭, ಫೆಬ್ರವರಿ ೨೦೧೩
ಸ್ಥಳ: ಕೆ.ಆರ್.ನಗರ, ಮೈಸೂರು ಜಿಲ್ಲೆ.

ಶಿಕ್ಷಣ ಕ್ಷೇತ್ರ ನಿರಂತರ ಬದಲಾವಣೆಗೊಳಪಡುತ್ತಿದೆ. ಸಾಮಾಜಿಕ, ಆರ್ಥಿಕ  ಹಾಗೂ ತಾಂತ್ರಿಕ ಬೆಳವಣಿಗೆಗಳಿಗೆ ಅನುಸಾರವಾಗಿ ಶಿಕ್ಷಣ ಕ್ಷೇತ್ರವೂ ಬದಲಾವಣೆಗೆ ತೆರೆದುಕೊಳ್ಳಬೇಕಾಗುತ್ತದೆ.

ಇಂಥ ಬದಲಾವಣೆಗಳ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನ ಸೆಳೆಯುವ, ಅವರನ್ನು ಪ್ರಕ್ರಿಯೆಯಲ್ಲಿ ಒಳಗೊಳ್ಳವ ಉದ್ದೇಶದೊಂದಿಗೆ ಶಿಕ್ಷಣ ಶಿಲ್ಪಿ ಶೈಕ್ಷಣಿಕ ಮಾಸ ಪತ್ರಿಕೆ ಹೊರ ಬರುತ್ತಿದೆ. ಬಹಳ ಮುಖ್ಯವಾಗಿ ಕ್ಷೀಣಿಸುತ್ತಿರುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ದಿಶೆಯಲ್ಲಿ ಶಿಕ್ಷಣ ಶಿಲ್ಪಿ ಕೆಲಸ ಮಾಡಲಿದೆ. ಮಕ್ಕಳ ಶಿಕ್ಷಣಕ್ಕಾಗಿ ಬದ್ಧತೆಯುಳ್ಳ ಶಿಕ್ಷಕರ ಒಂದು ಪಡೆಯನ್ನೇ ಹೊಂದಿರುವ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಈ ಪತ್ರಿಕೆಯನ್ನು ಹೊರ ತರುತ್ತಿದೆ. ಬಹುಭಾಗ ಶಿಕ್ಷಕರನ್ನೇ ಕೇಂದ್ರವನ್ನಾಗಿಟ್ಟುಕೊಂಡು ಪತ್ರಿಕೆ ಪ್ರಕಟಗೊಳ್ಳುತ್ತಿದೆ.

ಪತ್ರಿಕೆಯ ಬಿಡುಗಡೆ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ೨೦೧೩ರ ಫೆಬ್ರವರಿ ೧೬ ಮತ್ತು ೧೭ ರಂದು ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ನಡೆಯಲಿದೆ. ಪ್ರಸ್ತುತ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಕೆ.ಆರ್.ನಗರ (ಕೃಷ್ಣರಾಜನಗರ) ದಲ್ಲಿ ಈ ಸಮಾವೇಶ ನಡೆಯುತ್ತಿರುವುದು ವಿಶೇಷವೆಂದೇ ಹೇಳಬಹುದು.

ಸಮಾವೇಶವನ್ನು ಬೆಂಗಳೂರಿನ ನಿಡುಮಾಮಿಡಿ ಮಠದ ಶಿವಾಯತ ಧರ್ಮಗುರು ಶ್ರೀ ವೀರಭದ್ರ ಚನ್ನಮಲ್ಲಸ್ವಾಮೀಜಿ ಯವರು ಉದ್ಘಾಟಿಸಲಿದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಕಟಿಸಿರುವ ೧೦ ಪುಸ್ತಕಗಳು ಬಿಡುಗಡೆಯಾಗಲಿವೆ.

ಉದ್ಘಾಟನಾ ಸಮಾರಂಭದ ನಂತರ ಮಧ್ಯಾಹ್ನದ ಮೊದಲ ಗೋಷ್ಠಿಯಲ್ಲಿ ರಾಜ್ಯದ ವಿವಿಧ ರಾಜಕೀಯ ಪಕ್ಷದ ಮುಖಂಡರನ್ನು ಆಹ್ವಾನಿಸಿ ಸಾರ್ವಜನಿಕ ಶಿಕ್ಷಣ-ನಮ್ಮ ಬದ್ಧತೆ  ಕುರಿv ಗೋಷ್ಠಿಯನ್ನು ಏರ್ಪಡಿಸಿದೆ. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿ ಸಾರ್ವಜನಿಕ ಶಿಕ್ಷಣವನ್ನು ಉತ್ತಮಪಡಿಸಲು ತಮ್ಮ ಪಕ್ಷ ತೆಗೆದುಕೊಳ್ಳುವ ನಿಲುವುಗಳ ಬಗ್ಗೆ ವಿವರಿಸಲಿದ್ದಾರೆ. ಸಂಜೆ ಶಿಕ್ಷಣ ಹಕ್ಕು ಮಸೂದೆ ಕುರಿತ ಗೋಷ್ಟಿ ನಡೆಯಲಿದೆ. ಈ ವಿಷಯ ಪ್ರಸ್ತುತ ಹೆಚ್ಚಿನ ಚರ್ಚೆಯಲ್ಲಿದೆ. ಮೈಸೂರಿನ ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಉಮೇಶ್ ಮಾತನಾಡಲಿದ್ದಾರೆ.

ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಸೂರಿನ ಖ್ಯಾತ ಕಲಾವಿದ ಜನಾರ್ಧನ್(ಜನ್ನಿ) ಅವರಿಂದ ಹಾಡುಗಳು ಜೊತೆಗೆ ಹುಲಿಕಲ್ ನಟರಾಜ್ ಅವರಿಂದ ಪವಾಡಗಳ ರಹಸ್ಯ ಬಯಲು.

೧೭.೦೨.೨೦೧೩ ರ ಬೆಳಿಗ್ಗೆ ಸಮಗ್ರ ಹಾಗೂ ನಿರಂತರ ಮೌಲ್ಯಮಾಪನ ಕುರಿತು ಬೆಂಗಳೂರಿನ ಎಂ.ಇ.ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಗಣೇಶಭಟ್ಟ ಅವರು ಮಾತನಾಡಲಿದ್ದಾರೆ. ನಂತರ ಆರು ಸಮಾನಾಂತರ ಕಾರ್ಯಾಗಾರಗಳು ನಡೆಯಲಿವೆ. ಅವುಗಳೆಂದರೆ: ವಿಜ್ಞಾನ ಕಲಿಕೆ, ಗಣಿತದ  ಚಟುವಟಿಕೆಗಳು, ತರಗತಿಯಲ್ಲಿ ಪರಿಣಾಮಕಾರಿ ಸಂವಹನ, ಓರಿಗಾಮಿ, ಮಕ್ಕಳ ವಿಜ್ಞಾನ ಸಂಘಗಳನ್ನು ರಚಿಸಿ ನಡೆಸುವುದು ಹೇಗೆ? ಹಾಗೂ ಮಕ್ಕಳಿಗಾಗಿ ಬೇಸಿಗೆ ಶಿಬಿರಗಳು.
ಎರಡೂ ದಿನಗಳ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು ೧೦೦೦ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆಸಕ್ತಿಯುಳ್ಳ ಶಿಕ್ಷಕರು, ಶಿಕ್ಷಣಾಸಕ್ತರು ೨೦೦ರೂ ಪ್ರತಿನಿಧಿ ಶುಲ್ಕವನ್ನು ಪಾವತಿಸಿ ನೊಂದಾಯಿಸಿಕೊಳ್ಳಬಹುದಾಗಿದೆ. ಪ್ರತಿನಿಧಿಗಳಿಗೆ ಊಟ, ವಸತಿ ಹಾಗೂ ಸಮಾವೇಶದ ಬ್ಯಾಗ್ ನೀಡಲಾಗುವುದು.

ನೊಂದಾಯಿಸಿಕೊಳ್ಳಲು ಮಾಹಿತಿಗಾಗಿ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಈ.ಬಸವರಾಜು(9448957666), ಎಸ್.ಎಂ.ಶಶಿಧರ (9986214375) ರಾಜ್ಯ ಸಮಿತಿ ಸದಸ್ಯರಾದ ಶ್ರೀ ಎಂ.ಸಿ.ಡೋಂಗ್ರೆ, ಹಾಸನ (8861665252) ಮತ್ತು ಶ್ರೀ ಆರ್.ಉಮೇಶ್, ಹೊಳೆನರಸೀಪುರ(9242060395) ಇವರನ್ನು ಸಂಪರ್ಕಿಸಬಹುದಾಗಿದೆ. ಇಮೇಲ್ : karjvs@gmail.com
  
ವಂದನೆಗಳೊಂದಿಗೆ
ಈ.ಬಸವರಾಜು
ಕಾರ್ಯದರ್ಶಿ


View Larger Map