Saturday, September 3, 2016

ಸುಸ್ಥಿರ ಆಹಾರ ಭದ್ರತೆಗಾಗಿ ಬೇಳೆಕಾಳುಗಳು

ಅಂತರಾಷ್ಟ್ರೀಯ ಬೇಳೆಕಾಳುಗಳ ವರ್ಷಾಚರಣೆ - ೨೦೧೬ ರ  ಕುರಿತು ಲೇಖನ

ಸುಸ್ಥಿರ ಆಹಾರ ಭದ್ರತೆಗಾಗಿ ಬೇಳೆಕಾಳುಗಳು, ಸಾಧ್ಯತೆಗಳು ಮತ್ತು ಸವಾಲುಗಳು
-ಎಸ್. ವಿ. ಬುರ್ಲಿ 


ಪೀಠಿಕೆ : 
ಸದೃಡ ಶರೀರದಲ್ಲಿ ಸದೃಡ ಮನಸ್ಸು ಎಂಬಂತೆ, ಆರೋಗ್ಯ ಭಾಗ್ಯಕ್ಕೆ ಕಾರಣವಾದುದರಲ್ಲಿ ಬೇಳೆಕಾಳು ಬಹುಮುಖ್ಯವಾದವು. ಪರಂಪರೆಯಲ್ಲೂ ಬೇಳೆಕಾಳುಗಳ ಸ್ಥಾನ ಬಹುಮುಖ್ಯವಾಗಿದೆ. ಹಬ್ಬ ಹರಿದಿನಗಳಲ್ಲಿ ಮುತೈದೆಯರಿಗೆ ಕೊಡುವ ಬಾಗಿನದಲ್ಲೂ ಕೂಡ ಬೇಳೆಕಾಳಾದ ಕಡಲೆಯನ್ನು ಸಾಂಪ್ರದಾಯಿಕವಾಗಿ ಉಪಯೋಗಿಸುತ್ತಾರೆ. ಹುಣ್ಣಿಮೆ, ಅಮವಾಸ್ಯೆಗಳಲ್ಲಿ ಕಡಲೆಯ ಖಾದ್ಯಪದಾರ್ಥಗಳನ್ನು ಮಾಡಲಾಗುತ್ತದೆ. ಬೇಳೆಕಾಳುಗಳು ವಿಶ್ವದಾದ್ಯಂತ ಮುಖ್ಯಪೌಷ್ಠಿಕಾಂಶ ನೀಡುವ ಮುಖ್ಯ ಮೂಲಗಳಾಗಿವೆ. ಬೇಳೆಕಾಳುಗಳು ಔಷಧೀಯ ಗುಣಗಳನ್ನೂ ಸಹ ಹೊಂದಿವೆ. ನಮ್ಮ ಪೂರ್ವಜರಿಗೆ ಅನಾದಿಕಾಲದಿಂದಲೂ ಈ ವಿಷಯದ ಬಗ್ಗೆ ತಿಳುವಳಿಕೆ ಇರುವುದು ಕಂಡುಬರುತ್ತದೆ. ವೈದ್ಯರಾದ ’ಚರಕ’ ಹಾಗೂ ’ಶುಶ್ರುತ’ ಇವರು ತಮ್ಮ ಗ್ರಂಥಗಳಲ್ಲಿ ಬೇಳೆಕಾಳುಗಳ ಔಷಧೀಯ ಗುಣಗಳನ್ನು ಚಿಕಿತ್ಸಕ ವಿಧಾನಗಳಲ್ಲಿ ಬಳಸುತ್ತಿದ್ದರೆಂದು ವಿವರಿಸಿದ್ದಾರೆ.
ಬೇಳೆಕಾಳುಗಳು ನಮ್ಮ ದಿನನಿತ್ಯದ ಆಹಾರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಇದಕ್ಕೆ ಕಾರಣ ನಮ್ಮ ದೇಹಕ್ಕೆ ಬೇಕಾಗುವ ಅಧಿಕ ಪ್ರಮಾಣದ ಸಸಾರಜನಕ (ಪ್ರೋಟೀನ್) ಪೂರೈಕೆಯು ಬೇಳೆಕಾಳುಗಳಿಂದಾಗುತ್ತದೆ. ನಾವು ಉಪಯೋಗಿಸುವ ತೊಗರಿ, ಕಡಲೆ, ಉದ್ದು, ಹೆಸರು, ಅಲಸಂದಿ, ಹುರುಳಿ ಇತ್ಯಾದಿ ಬೇಳೆಕಾಳುಗಳಲ್ಲಿ ಸಸಾರಜನಕದ ಪ್ರಮಾಣ ಶೇಕಡಾ ೨೨-೨೪ ರಷ್ಟಿರುತ್ತದೆ. ಅಲ್ಲದೆ ಲೈಸಿನ್ ಎಂಬ ಪ್ರಮುಖವಾದ ಅಮೈನೋ ಆಮ್ಲದ ಭಾಗ ಹೆಚ್ಚಿರುತ್ತದೆ. ಶಾಖಾಹಾರಿಗಳು ಪ್ರಧಾನವಾಗಿರುವ ನಮ್ಮ ರಾಷ್ಟ್ರದಲ್ಲಿ ಪ್ರತಿಯೊಬ್ಬರೂ ದಿನನಿತ್ಯ ೭೮ ಗ್ರಾಂ ಬೇಳೆಕಾಳುಗಳನ್ನು ಬಳಸಬೇಕೆಂದು ಶಿಫಾರಸು ಮಾಡಲಾಗಿದೆ, ಆದರೆ ಈಗ ನಾವು ಉಪಯೋಗಿಸುತ್ತಿರುವ ಪ್ರಮಾಣ ಕೇವಲ ಶೇಕಡಾ ೩೪ ಗ್ರಾಂ ಮಾತ್ರ. ಇದಕ್ಕೆ ಮುಖ್ಯಕಾರಣ ನಮ್ಮ ದೇಶದಲ್ಲಿ ಬೇಳೆಕಾಳಿನ ಉತ್ಪತ್ತಿ ಸ್ಥಾಯಿ ಸ್ಥಿತಿಗೆ ತಲುಪಿದೆ. ಇದೇ ಕಾರಣಕ್ಕಾಗಿ ಇವುಗಳ ಬೆಲೆಗಳೂ ಸಹ ಗಗನಕ್ಕೇರಿವೆ.
ಭಾರತ ಕೃಷಿಪ್ರಧಾನ ರಾಷ್ಟ್ರವಾಗಿದ್ದರೂ ಕೃಷಿ ಕ್ಷೇತ್ರ ಇಂದು ಬಿಕ್ಕಟ್ಟಿನಲ್ಲಿದೆ. ರೈತರು ಆತ್ಮಹತ್ಯೆಯ ಹಾದಿಯಲ್ಲಿದ್ದಾರೆ. ಲಾಭವಿರಲಿ ಹಾಕಿದ ಬಂಡವಾಳವೂ ದೊರೆಯುತ್ತಿಲ್ಲ ಎಂಬ ಕೊರಗು ರೈತರನ್ನು ಕಾಡುತ್ತಿದೆ. ಮತ್ತೆ ಮತ್ತೆ ಕಾಡುವ ಬರಗಾಲ, ವಿಪರೀತ ಪರಿಸ್ಥಿತಿಗಳು, ಹೆಚ್ಚುತ್ತಿರುವ ರಾಸಾಯನಿಕ ಗೊಬ್ಬರ, ಔಷಧಿ ಬೆಲೆಗಳು, ಸಕಾಲಕ್ಕೆ ದೊರೆಯದ ಕಾಲುವೆ ನೀರು, ಪಾತಾಳ ಸೇರಿರುವ ಕೊಳವೆಬಾವಿಗಳಲ್ಲಿನ ನೀರು ಇತ್ಯಾದಿ ಸಮಸ್ಯೆಗಳಿಂದ ರೈತ ಕಂಗಾಲಾಗಿದ್ದಾನೆ.
ಆಧುನಿಕ ವಾಣಿಜ್ಯ ಬೆಳೆಗಳ ಭರದಲ್ಲಿ ಅವು ನೇಪಥ್ಯಕ್ಕೆ ಸರಿದಿವೆ. ಆದ್ದರಿಂದಲೇ ರೈತರಿಗೂ ಉಳಿಗಾಲವಿಲ್ಲ ದೆಶದ ಜನತೆಗೂ ಆಹಾರವಿಲ್ಲ ಎನ್ನುವಂತಾಗಿದೆ. ಪ್ರಪಂಚದ ಜನಸಂಖ್ಯೆ ಏರಿಕೆ ಪ್ರಮಾಣವನ್ನು ಗಮನಿಸಿದರೆ ೨೦೫೦ರ ವೇಳೆಗೆ ಜನರ ಆಹಾರ ಅಗತ್ಯತೆಯನ್ನು ಪೂರೈಸಲು ಇಂದಿಗಿಂತ ಶೇ.೭೦ ರಷ್ಟು ಹೆಚ್ಚು ಆಹಾರ ಬೆಳೆಯಬೇಕಾದ ಅಗತ್ಯವಿದೆ. ಜೊತೆಗೆ ಹೆಚ್ಚುತ್ತಿರುವ ವಾತಾವರಣದ ಇಂಗಾಲದ ಪ್ರಮಾಣವನ್ನು ನಿಯಂತ್ರಿಸಲು ರಾಸಾಯನಿಕ ಗೊಬ್ಬರ ಬಳಕೆಯನ್ನು ಕನಿಷ್ಠ ಪ್ರಮಾಣಕ್ಕೆ ತರಬೇಕಾಗಿದೆ.
ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಬೇಳೆಕಾಳುಗಳನ್ನು ಬೆಳೆಯುವ ಅಗತ್ಯ ಹೆಚ್ಚಲಿದೆ. ಬೇಳೆಕಾಳುಗಳನ್ನು ಬೆಳೆಯಲು ರಾಸಾಯನಿಕ ಗೊಬ್ಬರಗಳ ಅವಶ್ಯಕತೆ ಅತ್ಯಂತ ಕಡಿಮೆ ಹಾಗೂ ಇವು ಬರಗಾಲದಂತಹ ಪರಿಸರ ವಿಕೋಪಗಳನ್ನು ಸಹಿಸಿಕೊಂಡು ಬೆಳೆಯಬಲ್ಲವು. ಬೇಳೆಕಾಳುಗಳು ಭವಿಷ್ಯದ ಆಹಾರದ ಮೂಲಗಳಾಗಿವೆ. ಅದ್ಭುತ ರುಚಿಹೊಂದಿವೆ ಮತ್ತು ಎಲ್ಲರಿಗೂ ಇಷ್ಟವಾಗುತ್ತವೆ.
ವಿವರಣೆ :
ನಮ್ಮ ದೇಹವನ್ನು ಪೋಷಿಸುವ ಪ್ರಮುಖ ವಸ್ತುವೇ ಆಹಾರ. ಪ್ರಾಣಿಗಳಿಗೆ ಹಾಗೂ ಮಾನವರಿಗೆ ಪೌಷ್ಠಿಕ ಆಹಾರವು ಸಿಗದೇಇದ್ದರೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ರೋಗಗಳು ಬರುತ್ತವೆ. ರಾಷ್ಟ್ರದ ಜ್ವಲಂತ ಸಮಸ್ಯೆಗಳು ಬಡತನ, ಉಪವಾಸ ಮತ್ತು ಹಸಿವು. ಕೆಲವು ಜನರಿಗೆ ಆಹಾರವೇ ಸಿಗುವುದಿಲ್ಲ ಅಥವಾ ಆಹಾರ ಸಿಕ್ಕರೂ ಸರಿಯಾದ ಪ್ರಮಾಣದಲ್ಲಿ ಆಹಾರದಲ್ಲಿ ಪೋಷಕ ಇರುವುದಿಲ್ಲ. ಇದೇ ರೀತಿ ಬೇಳೆಕಾಳುಗಳು ದೊರೆಯದಿದ್ದಾಗ ಪೌಷ್ಠಿಕತೆಯ ತೊಂದರೆಗಳಿಂದ ಬಳಲುತ್ತೇವೆ ಮತ್ತು ಪೋಷಕಾಂಶಗಳು ದೀರ್ಘಕಾಲದವರೆಗೂ ನಿಯಮಿತವಾಗಿ ಆಹಾರದಲ್ಲಿ ದೊರೆಯದೇ ಇದ್ದರೆ ನ್ಯೂನ್ಯತಾ ಕಾಯಿಲೆಗಳು ಉಂಟಾಗುತ್ತವೆ. 
ಇವು ಅತ್ಯಂತ ರುಚಿಕರ ಹಾಗೂ ಪೌಷ್ಠಿಕವಾಗಿವೆ. ಬೇಳೆಕಾಳುಗಳು ಹೆಚ್ಚು ಲವಣ ಹಾಗೂ ಖನಿಜಾಂಶಗಳನ್ನು ಹೊಂದಿರುವುದಲ್ಲದೆ ಪ್ರೋಟೀನಿನ ಖಜಾನೆಗಳಾಗಿವೆ. ಇವುಗಳ ನಿಯಮಿತ ಸೇವನೆಯಿಂದ ಹೃದಯಕ್ಕೆ ಸಂಬಂಧಿಸಿದ 
ಕಾಯಿಲೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದಾಗಿದೆ. ರಕ್ತದೊತ್ತಡ, ರಕ್ತದಲ್ಲಿನ ಕೊಲೆಸ್ಟರಾಲ್ ನಿಯಂತ್ರಣ ಅಲ್ಲದೇ ದೇಹದ ಅನಗತ್ಯ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಇವು ಸಹಕಾರಿಯಾಗಿವೆ. ಇವುಗಳಲ್ಲಿ ವಿಟಮಿನ್ ’ಬಿ’ ಹಾಗೂ ಅಮೈನೋ ಆಮ್ಲ ಯಥೇಚ್ಛವಾಗಿದ್ದು ಹಲವು ದೈಹಿಕ ದೌರ್ಬಲ್ಯಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿವೆ.
ಬೇಳೆಕಾಳುಗಳು ಜಾನುವಾರುಗಳಿಗೂ ಸಹ ಉತ್ತಮ ಆಹಾರ. ತೊಗರಿ, ಅಲಸಂದಿ, ಹುರಳಿ ಮುಂತಾದ ಬೇಳೆಕಾಳುಗಳನ್ನು ಬೆಳೆದು, ಅವು ಹೂ ಬಿಡುವ ಸಮಯದಲ್ಲಿ ಗಿಡಗಳನ್ನು ಕಟಾವು ಮಾಡಿ ದನಕರುಗಳಿಗೆ ಮೇವನ್ನಾಗಿ ಬಳಸಬಹುದಾಗಿದೆ. ಇದಲ್ಲದೆ ಬೇಳೆಕಾಳುಗಳನ್ನು ಒಕ್ಕಣೆ ಮಾಡುವಾಗ ದೊರೆಯುವ ಹೊಟ್ಟು ಮತ್ತು ಸಿಪ್ಪೆ ಜಾನುವಾರುಗಳಿಗೆ ಶಕ್ತಿಯುತ ಆಹಾರವಾಗಬಲ್ಲದು. ಕೆಲವು ಕಡೆ ಹುರುಳಿಉನ್ನು ನೀರಿನಲ್ಲಿ ನೆನಸಿ ತರುವಾಯ ರುಬ್ಬಿ, ಹಾಲು ಕೊಡುವ ಹಸು, ಎಮ್ಮೆ ಮತ್ತು ಉಳುಮೆ ಮಾಡುವ ಎತ್ತುಗಳಿಗೆ ಆಹಾರವಾಗಿ ಕೊಡುತ್ತಾರೆ.  ಇದರಿಂದ ಹಸುಗಳು ಹೆಚ್ಚು ಹಾಲು ಕೊಡುತ್ತವೆ ಹಾಗೂ ಎತ್ತುಗಳು ಹೆಚ್ಚು ಶಕ್ತಿಯುತವಾಗಲು ಸಹಾಯವಾಗುತ್ತದೆ.
ಪ್ರಾರಂಭದ ಹಂತದಲ್ಲೇ ಆಯಾ ರಾಜ್ಯಗಳಲ್ಲಿನ ಬೇಳೆಕಾಳಿನ ಕ್ಷೇತ್ರ ಅಂದಾಜು ಮಾಡಿ, ಆ ಕ್ಷೇತ್ರಕ್ಕೆ ಬೇಕಾಗುವ ಬೀಜದ ಪ್ರಮಾಣ ಮತ್ತು ಅವುಗಳ ಉತ್ಪಾದನೆ ವ್ಯವಸ್ಥೆ ಹಾಗೂ ಉತ್ಪಾದಿಸಿದ ಬೀಜಗಳು ರೈತರಿಗೆ ಸಕಾಲದಲ್ಲಿ ಮುಟ್ಟಲು ದಕ್ಷ ಕಾರ್ಯಾಚರಣೆ ಅವಶ್ಯ. ಬೇಳೆಕಾಳಿನ ಬೀಜಗಳನ್ನು ಬಿತ್ತುವ ಮುಂಚೆ ರೈಜೋಬಿಯಂ ಜೀವಾಣು ಲೇಪನ ಮಾಡುವುದರಿಂದ ದೊರಕುವ ಇಳುವರಿ ಹೆಚ್ಚಳವನ್ನು ರೈತರು ಮನಗಂಡಿದ್ದಾರೆ. ಆದ್ದರಿಂದ ಈ ಬೀಜದ ಜೊತೆಯಲ್ಲಿ ಆಯಾ ಬೇಳೆಕಾಳುಗಳಿಗೆ ಸರಿಹೊಂದುವ ರೈಜೋಬಿಯಂ ಜೀವಾಣು ಸರಬರಾಜು ಮಾಡಿದರೆ ಹೆಚ್ಚಿನ ಪ್ರಯೋಜನ ದೊರಕುತ್ತದೆ. ಬೇಳೆಕಾಲುಗಳನ್ನು ಬಹು ಬೆಳೆಯ ಪದ್ಧತಿಯಲ್ಲೂ ಸಹ ಬೆಳೆಸಲು ಸಾಧ್ಯವಾಗುತ್ತಿದೆ. ಇದರಿಂದ  ವರ್ಷದಲ್ಲಿ ಎರಡು ಮುಖ್ಯ ಬೆಳೆಗಳನ್ನು ಬೆಳೆಯುತ್ತಿರುವ ರೈತರು ಕಡಿಮೆ ಅವಧಿಯಲ್ಲಿ ಅಧಿಕ ಇಳುವರಿ ಕೊಡುವ ಬೇಳೆಕಾಳಿನ ಬೆಳೆಯನ್ನು ಮೂರನೇ ಬೆಳೆಯಾಗಿ ಬೆಳೆಯಬಹುದಾಗಿದೆ. ಇದರಿಂದ ಉತ್ಪನ್ನ ಅಧಿಕಗೊಳ್ಳುವದರೊಂದಿಗೆ ಆರ್ಥಿಕ ಲಾಭ ಹೆಚ್ಚುತ್ತದೆ ಮತ್ತು ಮಣ್ಣಿನ ಫಲವತ್ತತೆಯನ್ನೂಸಹ ಕಾಪಾಡಿಕೊಳ್ಳಬಹುದು.
ಬೇಳೆಕಾಳು ಬೆಳೆಗಳನ್ನು ಹೆಚ್ಚಾಗಿ ಮಳೆ ಆಶ್ರಿತ ಬೆಳೆಯಾಗಿ ಬೆಳಸಲಾಗುತ್ತದೆ. ಇದರಿಂದ ಇಳುವರಿ ಕಡಿಮೆಯಾಗುವುದಲ್ಲದೆ ಒಟ್ಟಾರೆ ಉತ್ಪನ್ನದಲ್ಲಿ ಏರಿಳಿತಗಳು ಕಂಡುಬರುವದು ಸಮಾನ್ಯವಾಗಿದೆ. ಮಳೆ ಸಕಾಲದಲ್ಲಿ ಬಂದರೆ ಆ ವರ್ಷ ಉತ್ಪನ್ನ ಹೆಚ್ಚುತ್ತದೆ. ಮಳೆ ಅಭಾವವಾದರೆ ಇಳುವರಿ ತಾನೇ ಕುಗ್ಗುತ್ತದೆ. ಈಗಿನ ಖುಷ್ಕಿ ಬೇಸಾಯದಲ್ಲಿ ಹೆಚ್ಚಿನ ಸಂಶೋಧನೆ ನಡೆದಿದ್ದು ಜಲಾನಯನ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಶಿಫಾರಸು ಮಾಡಿರುವ ಪದ್ಧತಿಗಳನ್ನು ಪ್ರತಿಯೊಬ್ಬ ರೈತರೂ ಅಳವಡಿಸಿ, ಇಳುವರಿಯನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ.
ಬೇಳೆಕಾಳು ಬೆಳೆಯುವ ಸ್ಥಳಗಳು : 
ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ವಿವಿಧ ತರಹದ ಬೇಳೆಕಾಳಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಬೇಳೆಕಾಳುಗಳ ಕ್ಷೇತ್ರ ಹಾಗೂ ಉತ್ಪನ್ನದಲ್ಲಿ ಭಾರತಕ್ಕೆ ಮೊದಲನೆ ಸ್ಥಾನವಿದೆ. ಭಾರತ, ಆಫ್ರಿಕಾ,ಆಸ್ಟ್ರೇಲಿಯಾ, ಥೈಲ್ಯಾಂಡ, ಅಮೇರಿಕಾ, ಕಾಂಬೋಡಿಯಾ, ವಿಯಟ್ನಾಂ, ಇಂಡೋನೇಷ್ಯ, ಟರ್ಕಿ, ಶ್ರೀಲಂಕಾ, ಚೀನಾ, ಬರ್ಮಾ, ಪಾಕಿಸ್ತಾನ ದೇಶಗಳಲ್ಲಿ ಬೆಳೆಯಲಾಗುತ್ತಿದೆ. ಆದರೆ ಬೇಳೆಕಾಳುಗಳ ಹೆಚ್ಚಿನ ಇಳುವರಿ ಕಲವೇ ದೇಶಗಳಿಗೆ ಸೀಮಿತವಾಗಿದೆ. ಅಮೇರಿಕಾದಲ್ಲಿ ಪ್ರತಿ ಹೆಕ್ಟೇರ್‌ಗೆ ೧೬೯೧ ಕೆ.ಜಿ.,  ಚೀನಾದಲ್ಲಿ ೧೩೭೮ಕೆ.ಜಿ., ಟರ್ಕಿಯಲ್ಲಿ ೯೫೩ ಕೆ.ಜಿ. ಇಳುವರಿ ಪಡೆಯಲಾಗುತ್ತಿದೆ.
ಭಾರತದಲ್ಲಿ ಬೇಳೆಕಾಳುಗಳನ್ನು ಮುಖ್ಯವಾಗಿ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್, ಮಹಾರಾಷ್ಟ್ರಾ, ಕರ್ನಾಟಕ, ಹಿಮಾಚಲ ಪ್ರದೇಶ, ಆಂದ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿದೆ. ಈ ರಾಜ್ಯಗಳಲ್ಲದೆ ಇತರ ರಾಜ್ಯಗಳಲ್ಲಿಯೂಸಹ ಕಡಿಮೆ ಪ್ರಮಾಣದಲ್ಲಿ ಬೇಳೆಕಾಳು ಬೆಳೆಯಲಾಗುತ್ತಿದೆ. ಅಧಿಕ ಪ್ರಮಾಣದಲ್ಲಿ ಬೆಳೆಸುತ್ತಿರುವ ಬೇಳೆಕಾಳುಗಳೆಂದರೆ ತೊಗರಿ, ಕಡಲೆ, ಹೆಸರು, ಉದ್ದು, ಅಲಸಂದಿ ಇತ್ಯಾದಿ. ನಮ್ಮ ದೇಶದಲ್ಲಿ ಬೇಳೆಕಾಳು ಬೆಳೆಯುವ ಕ್ಷೇತ್ರ ಸುಮಾರು ೨೮.೦೮ ಮಿಲಿಯನ್ ಹೆಕ್ಟರ್ ಇದ್ದು, ಇದರಿಂದ ೧೫೦೧೧ ಮಿಲಿಯನ್ ಟನ್ ಉತ್ಪನ್ನ ದೊರಕುತ್ತಿದೆ. ಪ್ರತಿ ಹೆಕ್ಟರನ ಸರಾಸರಿ ಇಳುವರಿ ೬೦೯ ಕೆ.ಜಿಗಳು. ಇದು ಜಗತ್ತಿನ ಸರಾಸರಿ ಇಳುವರಿಗಿಂತ ಕಡಿಮೆ ಮಟ್ಟದ್ದಾಗಿದೆ.
ಕರ್ನಾಟಕದಲ್ಲಿ ಮುಖ್ಯವಾಗಿ ಬೆಳೆಯುವ ಬೇಳೆಕಾಳುಗಳೆಂದರೆ ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂದಿ ಮತ್ತು ಅವರೆ. ಕರ್ನಾಟಕದಲ್ಲಿ ಕಡಲೆ ಮತ್ತು ತೊಗರಿ ಬೆಳೆಗಳು ಹೆಚ್ಚಿನ ಕ್ಷೇತ್ರವನ್ನು ಆವರಿಸಿಕೊಂಡಿವೆ. ಬೇಳೆಕಾಳುಗಳನ್ನು ಪ್ರಮುಖವಾಗಿ ಬೆಳೆಯುವ ಪ್ರದೇಶಗಳಲ್ಲಿ ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಾದ ಗುಲಬರ್ಗ, ಬಿಜಯಪುರ, ಧಾರವಾಡ, ರಾಯಚಉರ ಹಾಗೂ ಬೆಳಗಾವಿ ಮತ್ತು ದಕ್ಷಿಣ ಭಾಗದ ಜಿಲ್ಲೆಗಳಾದ ತುಮಕೂರು, ಮೈಸೂರು ಮತ್ತು ಮಂಡ್ಯ ಮುಖ್ಯವಾದವುಗಳು. ಈ ಜಿಲ್ಲೆಗಳು ರಾಜ್ಯದ ಒಟ್ಟರೆ ಬೇಳೆಕಾಳು ಬೆಳೆ ಕ್ಷೇತ್ರದ ಶೇಕಡಾ ೮೦ ಭಾಗವನ್ನು ಹೊಂದಿದೆ. ಉಳಿದ ಶೇಕಡ ೨೦ ಭಾಗದಷ್ಟು ಕ್ಷೇತ್ರ ಇತರ ಜಿಲ್ಲೆಗಳಲ್ಲಿ ಹರಡಿ ಕೊಂಡಿದೆ. ಗುಲಬರ್ಗ ಹಾಗೂ ಬೀದರ್ ಜಿಲ್ಲೆಗಳನ್ನು ಬೇಳೆಕಾಗಳ ಕಣಜ ಎಂದು ಕರೆಯಲಾಗುತ್ತಿದೆ. ಈ ಎರಡು ಜಿಲ್ಲೆಗಳಲ್ಲಿನ ಒಟ್ಟಾರೆ ಕ್ಷೇತ್ರ ರಾಜ್ಯದಲ್ಲಿನ ಒಟ್ಟಾರೆ ಕ್ಷೇತ್ರದ ಅರ್ಧದಷ್ಟಿದೆ.

ಉಪಯೋಗಗಳು :
  • ·        ಬೇಳೆಕಾಳುಗಳು ಹೆಚ್ಚಿನ ಪ್ರೋಟೀನುಗಳನ್ನು ಹೊಂದಿದ್ದು ದೇಹದ ಆರೋಗ್ಯಕರ ಬೆಳವಣಿಗೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೇ ಚಯಾಪಚಯ ಕ್ರೀಯೆಯಲ್ಲಿ ಬಹುಮುಖ್ಯವಾದ ಪಾತ್ರವಹಿಸುತ್ತದೆ.
  • ·        ಬೇಳೆಕಾಳಿನ ಬೆಳೆಗಳು ಜಮೀನಿನಲ್ಲಿ ಸಾರಜನಕ ಹೆಚ್ಚಿಸುವ ಮೂಲಕ  ಫಲವತ್ತತೆಯನ್ನು ಹೆಚ್ಚಿಸುತ್ತದೆ.
  • ·        ಸೋಯಾದಂತಹ ಕಾಳಿನಲ್ಲಿ ಮಾಂಸಾಹಾರದಿಂದ ದೊರಕಬಹುದಾದ ಅಂಶದಷ್ಟು ಪ್ರೋಟೀನ ದೊರೆಯುತ್ತದೆ.
  • ·        ಈ ಬೆಳೆಗಳು ಕಟಾವು ಆದಮೇಲೂಸಹ ಬೇರಿನ ಮೇಲಿರುವ ಗಂಟುಗಳು ಮಣ್ಣಿನಲ್ಲಿ ಉಳಿಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.
  • ·        ಬೇಳೆಕಾಳಿನ ಬೆಳೆ ಕೊಯ್ಲು ಆದ ಮೇಲೆ ದೊರಕುವ ಎಲೆ, ತರಗು, ಕೂಳೆ ಇತ್ಯಾದಿ ತಾಜ್ಯ ವಸ್ತುಗಳನ್ನು ಮಣ್ಣಿನಲ್ಲಿ ಸೇರಿಸುವುದರಿಂದ ಸಾವಯವ ಪ್ರಮಾಣ ಹೆಚ್ಚುತ್ತದೆ.
  • ·        ಈ ಬೆಳೆಗಳ ಬೇರುಗಳು ಮಣ್ಣಿನಲ್ಲಿ ಹೆಚ್ಚಿನ ರೀತಿಯಲ್ಲಿ ಹರಡುವುದರಿಂದ ಜಮೀನಿನ ಸವಕಳಿ ಸಹ ತಡೆಗಟ್ಟಲು ಅನುಕೂಲವಾಗುತ್ತದೆ.
  • ·        ಇವುಗಳನ್ನು ಆಹಾರವಾಗಿ ಬಳಿಸಿದ ರಾಸುಗಳಿಗೆ ಶಕ್ತಿ ನೀಡುತ್ತವೆ ಮತ್ತು ಹಸು ಎಮ್ಮೆಗಳು ಹೆಚ್ಚಿಗೆ ಹಾಲನ್ನು ಕೊಡುತ್ತವೆ.
  • ·        ಬೇಳೆಕಾಳುಗಳು ಪರಿಸರ ಹಾಗೂ ರೈತಮಿತ್ರ ಬೆಳೆಯಾಗಿದೆ.
  • ·        ಬೇಳೆಕಾಳು ಬೆಳೆಯನ್ನು ಬೆಳೆಯಲು ಅಗತ್ಯವಿರುವ ನೀರಿನ ಪ್ರಮಾಣ ಬೇರೆ ಬೆಳೆಗಳಿಗೆ ಹೋಲಿಸಿದರೆ ಅತೀ ಕಡಿಮೆ ಇರುತ್ತದೆ. ಇತರೆ ಎಲ್ಲ ಆಹಾರ ಧಾನ್ಯಗಳಿಗಿಂತ ಬೇಳೆಕಾಳುಗಳು ಹೆಚ್ಚಿನ ಪೋಷಕಾಂಶ ಒದಗಿಸುತ್ತವೆ.

ಸವಾಲುಗಳು :
  •                ಹೆಚ್ಚುತ್ತಿರುವ ಜನಸಂಖ್ಯೆಗಾಗಿ ಹೆಚ್ಚು ಹೆಚ್ಚು ಬೇಳೆಕಾಳುಗಳನ್ನು ಬೆಳೆಯಯುವ ಅಗತ್ಯತೆ ಇದೆ. ಆದುದರಿಂದ ಬೇಳೆಕಾಳುಗಳ ಉತ್ಪತ್ತಿ ಹೆಚ್ಚಾಗುವಂತೆ ನೋಡಿಕೊಳ್ಳಬೇಕು.
  •                ಬೇಳೆಕಾಳುಗಳ ಬೆಳೆಯಲ್ಲಿ ಅಧಿಕ ಇಳುವರಿ ಕೊಡುವ ತಳಿಗಳ ಕೊರತೆ ಇರುವುದು.
  •                ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿ ಕ್ಷೇತ್ರ ಇಂದು ಹಲವಾರು ಕಾರಣಗಳಿಂದ ಬಿಕ್ಕಟ್ಟಿನಲ್ಲಿದೆ.
  •                ರೈತರು ಆತ್ಮಹತ್ಯೆಯ ಹಾದಿಯಲ್ಲಿದ್ದಾರೆ, ಲಾಭವಿರಲಿ ಹಾಕಿದ ಬಂಡವಾಳವೂ ದೊರೆಯುತ್ತಿಲ್ಲ ಎಂಬ ಕೊರಗು ರೈತರನ್ನು ಕಾಡುತ್ತಿದೆ.
  •                ರೈತರು ಹೆಚ್ಚಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ಮಣ್ಣಿನ ಫಲವತ್ತತೆ ಕೂಡಾ ಕಡಿಮೆಯಾಗುತ್ತಿದೆ.
  •                ಇವುಗಳ ಬೆಲೆಗಳೂ ಸಹ ಗಗನಕ್ಕೇರಿರುವುದರಿಂದ ಜನ ಸಾಮಾನ್ಯರು ಬೇಳೆಕಾಳುಗಳನ್ನು ಕೊಳ್ಳಲು ಕಷ್ಟವಾಗುತ್ತದೆ.
  •                ಇಂತಹ ಶಕ್ತಿಯುತ ಬೆಳೆಗಳನ್ನು ರೈತರು ಕಡಿಮೆ ಫಲವತ್ತತೆಯ ಜಮೀನುಗಳಲ್ಲಿ ಬೆಳೆಸುತ್ತಿರುವುದು.
  •                ಬೇಳೆಕಾಳು ಬೆಳೆಗಳನ್ನು ಸಣ್ಣ ರೈತರು ಬೆಳೆಯುವುದರಿಂದ ರೈತರಿಗೆ ಆರ್ಥಿಕ ನೆರವಿನ ಅವಶ್ಯಕತೆ ಇದೆ.
  •                ನೀರಿನ ಅನುಕೂಲತೆ ಇದ್ದ ರೈತರು ಬೇಳೆಕಾಳು ಬೆಳೆಯನ್ನು ಬೆಳೆಯುವ ಮನಸ್ಸು ಮಾಡದಿರುವುದು.
  •                ಉಳುವ ಭೂಮಿಯ ಪ್ರಮಾಣ ಕಡಿಮೆಯಾಗುತ್ತಿದೆ. ನಗರೀಕರಣ ಮತ್ತು ಔದ್ಯೋಗಿಕರಣದ ಕಡೆಗೆ ಜನರು ಹೆಚ್ಚು ಒಲುವನ್ನು ತೋರುತ್ತಿದ್ದಾರೆ.
  •                ವಾತಾವರಣದಲ್ಲಿ ಆಗುವ ಹವಾಮಾನದ ಬದಲಾವಣೆಗಳು ಬೆಳೆಗೆ ಕೆಲವೊಮ್ಮೆ ಮಾರಕವಾಗಿವೆ.

ಸೂಕ್ತ ಸಲಹೆಗಳು :
               ಬೇಳೆಕಾಳಿನ ಬೆಳೆಗಳಲ್ಲಿ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಇದಕ್ಕೆ ಹೆಚ್ಚಿನ ಆದ್ಯತೆ ಕೊಡುವುದು ಅವಶ್ಯಕ ಮತ್ತು ಅನಿವಾರ್ಯ. ನಮ್ಮಲ್ಲಿ ಹೆಚ್ಚಾಗಿ ಮಳೆ ಆಶ್ರಯದಲ್ಲಿ ಬೇಳೆಕಾಳುಗಳನ್ನು ಬೆಳೆಯುತ್ತಿರುವುದರಿಂದ ಇಳುವರಿ ಕಡಿಮೆ ಇದೆ. ಇಂತಹ ಪ್ರದೇಶಗಳಲ್ಲಿ ಜಲಾನಯನ ಅಭಿವೃದ್ಧಿ ಕಾರ್ಯಗಳನ್ನು ಅಳವಡಿಸುವುದು ಬಹಳ ಮುಖ್ಯ ಹಾಗೂ ಶುಷ್ಕ ವಾತಾವರಣಕ್ಕೆ ಹೊಂದಿಕೊಳ್ಳುವ ತಳಿಗಳನ್ನು ಬೆಳೆಸುವುದು ಸೂಕ್ತ.
               ಬೇಳೆಕಾಳುಗಳ ಬೆಳೆಗಳನ್ನು ನಿರಾವರಿ ಕ್ಷೇತ್ರದಲ್ಲಿ ಬೆಳೆಸುವುದರಿಂದ ಇಳುವರಿ ತಾನೇ ತಾನಾಗಿ ಹೆಚ್ಚುತ್ತದೆ. ಈಗ ಅಧಿಕ ಇಳುವರಿ ಕೊಡುವ ತಳಿಗಳು ಹಾಗೂ ಹೈಬ್ರಿಡ್ ತಳಿಗಳು ಬಿಡುಗಡೆಯಾಗಿವೆ. ರೈತರು ಇವುಗಲ ಲಾಭ ಪಡೆಯಬಹುದಾಗಿದೆ. ಈ ತಳಿಗಳು ರಸಗೊಬ್ಬರ ಮತ್ತು ನೀರಾವರಿಗೆ ಹೆಚ್ಚಿನ ರೀತಿಯಲ್ಲಿ ಪ್ರತಿಕ್ರಿಯಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.
ಬೆಳೆದ ಬೇಳೆಕಾಳುಗಳಿಗೆ ಸರಿಯಾದ ಬೆಲೆ ದೊರಕಲು ಸರಕಾರ ನೆರವಾಗಬೇಕು. ಉತ್ತಮ ಬೀಜಗಳ ಉತ್ಪಾದನೆ ಹಾಗೂ ಉತ್ಪಾದಿಸಿದ ಬೀಜಗಳು ರೈತರಿಗೆ ಸಕಾಲದಲ್ಲಿ ತಲುಪುವ ವ್ಯವಸ್ಥಿತ ರೀತಿಯ ಕಾರ್ಯಾಚರಣೆ ಜಾರಿಗೆ ತರಬೇಕು. ಬೀಜಗಳನ್ನು ಸರಬರಾಜು ಮಾಡುವಾಗ ಇವುಗಳ ಜೊತೆಗೆ ಬೇಕಾದ ಸೂಕ್ತ ರೈಸೊಬಿಯಂ ಜೀವಾಣು ಗೊಬ್ಬರವನ್ನು ಸಹ ಪೂರೈಸಬೇಕು.
ಬೇಳೆಕಾಳುಗಳ ಮಿಶ್ರಬೆಳೆ ಹಾಗೂ ಬಹುಬೆಳೆಗಳ ಕ್ಷೇತ್ರ ಹೆಚ್ಚಿಸಿದರೆ ಉತ್ಪನ್ನ ತಾನೇ ಹೆಚ್ಚುತ್ತದೆ. ರೋಗ, ಕೀಟ ಹಾಗೂ ಕಳೆಗಳಿಂದ ಬೆಳೆಯನ್ನು ಕಾಪಾಡಲು ಈಗ ಶಿಫಾರಸು ಮಾಡಿರುವ ಸಮಗ್ರ ಹತೋಟಿ ಕ್ರಮಗಳನ್ನು ಅನುಸರಿಸಬೇಕು. ನಮ್ಮ ದೆಶ ಮತ್ತು ನಮ್ಮ ರಾಜ್ಯದಲ್ಲಿಯ ಬೇಳೆಕಾಳುಗಳ ಕಡಿಮೆ ಇಳುವರಿಗೆ ಇರಬಹುದಾದ ಸಮಸ್ಯೆಗಳನ್ನು ಬಗೆಹರಿಸಿದಾಗ ಮಾತ್ರ ನಾವು ಸ್ವಾವಲಂಬನೆಯ ಸ್ಥಿತಿಗೆ ತಲಪಲು ಸಾಧ್ಯ.
ಮಹಿಳೆಯರಲ್ಲಿನ ಹಾಗೂ ಎಳೆಯ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ಗಮನಿಸಿದರೆ ಭಾರತದ ಭವಿಷ್ಯದ ಬಗ್ಗೆ ಪ್ರಶ್ನೆಗಳೇಳುತ್ತವೆ. ಇವೆಲ್ಲದರ ಪರಿಹಾರವಾಗಿ ಬೇಳೆಕಾಳುಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಕೃಷಿ ಕ್ಷೇತ್ರವನ್ನು ಉಳಿಸುವ ನಿಟ್ಟಿನಲ್ಲಿ, ಜನರ ಅಪೌಷ್ಠಿಕತೆಯನ್ನು ನಿವಾರಿಸುವದಕ್ಕೋಸ್ಕರ ಪ್ರಸ್ತುತ ವರ್ಷವನ್ನು ಬೇಳೆಕಾಳುಗಳ ವರ್ಷ ವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಜನಸಮುದಾಯಕ್ಕೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ.

ಸಹಾಯಕ ಆಕರಗಳು : ಡಾ||ಎಸ್.ಎಂ.ಶಾಂತವೀರಭದ್ರಯ್ಯ ಇವರು ಬರೆದ ಪುಸ್ತಕ ಬೇಳೆಕಾಳು ಬೆಳೆಗಳುಮತ್ತು ಮಾಹಿತಿ ಸಂಗ್ರಹಣೆ. 
ಶ್ರೀ ಎಸ್. ವಿ. ಬುರ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕರು 
ಬೆಳಗಾವಿ ವಿಭಾಗದ ಜಂಟಿಕಾರ್ಯದರ್ಶಿ ಹಾಗೂ
ಅಧ್ಯಕ್ಷರು ಕೆ.ಜೆ.ವಿ.ಎಸ್. ವಿಜಯಪುರ ಜಿಲ್ಲಾ ಘಟಕ,
ಬಂಜಾರಾ ಪ್ರೌಢಶಾಲೆ, ವಿಜಯಪುರ

Wednesday, August 24, 2016

ವಿಜ್ಞಾನಿ ಸಿ.ಎನ್.ಆರ್ ರಾವ್ ಅವರಿಗೆ ಭಾಸ್ಕರ ಪ್ರಶಸ್ತಿ; ಕೆ.ಜೆ.ವಿ.ಎಸ್. ಸಂತಸ

ವಿಜ್ಞಾನಿ ಸಿ. ಎನ್.ಆರ. ರಾವ್ ಇವರಿಗೆ ಸಂದ ಭಾಸ್ಕರ ಪ್ರಶಸ್ತಿ-೨೦೧೬
ಕೆ.ಜೆ.ವಿ.ಎಸ್. ಸಂತಸ
ದಿನಾಂಕ ೧೯-೮-೨೦೧೬ ರಂದು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ, ವಿಜ್ಞಾನಿ ಭಾಸ್ಕರಾಚಾರ್ಯ (ಭಾಸ್ಕರ-೨) ಅವರ ೯ನೇ ಜನ್ಮಶತಮಾನೋತ್ಸವ ಅಂಗವಾಗಿ ಸಿಂದಗಿಯ ಚೆನ್ನವೀರ ಸ್ವಾಮೀಜಿಯವರ ವತಿಯಿಂದ ಭಾರತ ರತ್ನ ಸಿ. ಎನ್. ಆರ್. ರಾವ್ ಅವರಿಗೆ ಭಾಸ್ಕರ ಪ್ರಶಸ್ತಿ - ೨೦೧೬ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಂತಸದ ವಿಷಯ.