Friday, February 8, 2013

ಫೆ.16ರಿಂದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮಿಲನ- ಪ್ರಜಾವಾಣಿ



ಕೆ.ಆರ್.ನಗರ: ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ಪಟ್ಟಣದಲ್ಲಿ ಫೆಬ್ರುವರಿ 16 ಮತ್ತು 17ರಂದು ರಾಜ್ಯಮಟ್ಟದ ಶೈಕ್ಷಣಿಕ ಸಮ್ಮಿಲನ ಮತ್ತು `ಶಿಕ್ಷಣ ಶಿಲ್ಪಿ' ವಾರಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಬದಲಾವಣೆ ಅವಶ್ಯ. ಇಂತಹ ಬದಲಾವಣೆಗಳ ಬಗ್ಗೆ ಶಿಕ್ಷಕರ, ವಿದ್ಯಾರ್ಥಿಗಳ, ಪೋಷಕರ ಮತ್ತು ಸಮುದಾಯದ ಗಮನ ಸೆಳೆಯುವ ಉದ್ದೇಶದಿಂದ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ದಿಸೆಯಲ್ಲಿ `ಶಿಕ್ಷಣ ಶಿಲ್ಪಿ' ಶೈಕ್ಷಣಿಕ ವಾರಪತ್ರಿಕೆ ಹೊರ ತರಲಾ ಗುತ್ತಿದೆ ಎಂದರು.
ಫೆ 16ರಂದು ನಡೆಯುವ ಉದ್ಘಾಟ ನಾ ಕಾರ್ಯಕ್ರಮಕ್ಕೆ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಡಿಎಸ್‌ಇಆರ್‌ಟಿ ನಿರ್ದೇಶಕ ರಾಮ ರಾವ್, ಬಿಸಿಯೂಟ ಸಹನಿರ್ದೇಶಕ ಜಯಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಪ್ರೊ. ಎಚ್.ಆರ್. ರಾಮಕೃಷ್ಣರಾವ್, ವಾರಪತ್ರಿಕೆ ಸಂಪಾದಕ ಈ.ನಂಜಪ್ಪ, ಶಾಸಕ ಸಾ.ರಾ. ಮಹೇಶ್ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಜ್ಞರು ಭಾಗವಹಿಸಲಿದ್ದಾರೆ ಎಂದರು.
`ಸಾರ್ವಜನಿಕ ಶಿಕ್ಷಣ- ನಮ್ಮ ಬದ್ಧತೆ' ಮತ್ತು `ಶಿಕ್ಷಣ ಹಕ್ಕು ಮಸೂದೆ' ಕುರಿತು ವಿಚಾರಗೋಷ್ಠಿ ನಡೆಯಲಿದೆ.
ಅದೇ ದಿನ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದ ಜನಾರ್ದನ್ ಅವರಿಂದ ಗಾಯನ, ಹುಲಿಕಲ್ ನಟರಾಜ್ ಅವರಿಂದ ಪವಾಡ ರಹಸ್ಯ ಬಯಲು ಪ್ರದರ್ಶನ, `ಚಂದನ ಚಿಗುರು' ಚಿತ್ರ ಪ್ರದರ್ಶನ, ಬೆಂಗಳೂರಿನ ಅಸ್ಟ್ರನಾಮಿಕಲ್ ಸೊಸೈಟಿ ವತಿಯಿಂದ ಆಕಾಶ ವೀಕ್ಷಣೆ ಏರ್ಪಡಿಸ ಲಾಗಿದೆ ಎಂದು ಬಿಇಒ ತಿಳಿಸಿದರು.
ಫೆ. 17ರಂದು `ವ್ಯಾಪಕ ಹಾಗೂ ನಿರಂತರ ಮೌಲ್ಯಮಾಪನ' ಕುರಿತು ಬೆಂಗಳೂರಿನ ಎಂಇಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರೊ.ಗಣೇಶ್ ಭಟ್ಟ ಮಾತನಾಡಲಿದ್ದಾರೆ. ವಿಜ್ಞಾನ ಕಲಿಕೆ, ಗಣಿತದ ಚಟುವಟಿಕೆಗಳು, ತರಗತಿಯಲ್ಲಿ ಪರಿಣಾಮಕಾರಿ ಸಂವಹನ, ಓರಿಗಾಮಿ, ಮಕ್ಕಳ ವಿಜ್ಞಾನ ಸಂಘಗಳನ್ನು ರಚಿಸಿ ನಡೆಸುವುದು ಹೇಗೆ, ಗಣಿತದ ಕಿಟ್ ಪರಿಚಯ, ಮಕ್ಕಳಿಗಾಗಿ ಬೇಸಿಗೆ ಶಿಬಿರ ಕುರಿತು ಕಾರ್ಯಾಗಾರ ನಡೆಯಲಿದೆ.
ಅಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ತಜ್ಞ ಜಿ.ಎಸ್. ಜಯದೇವ್, ಪಠ್ಯ ಪುಸ್ತಕ ನಿರ್ದೇಶನಾಲಯದ ಉಪ ನಿರ್ದೇಶಕ ಬೆಳ್ಳಶೆಟ್ಟಿ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಡಿಡಿಪಿಐಗಳು ಭಾಗವಹಿಸ ಲಿದ್ದಾರೆ. ಈ ಎರಡು ದಿನಗಳ ಕಾರ್ಯ ಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು ಒಂದು ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿನಿಧಿಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಫೆ. 15ರೊಳಗಾಗಿ ರೂ. 200 ಶುಲ್ಕ ನೀಡಿ ಹೆಸರು ನೋಂದಾಯಿಸಿ  ಕೊಳ್ಳ ಬಹುದಾಗಿದೆ ಎಂದು ತಿಳಿಸಿದರು.
ರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯದರ್ಶಿ ಈ.ಬಸವರಾಜು, ಕ್ಷೇತ್ರ ಸಮನ್ವಯಾಧಿಕಾರಿ ಡಾ. ಬಿ.ಸಿ. ದೊಡ್ಡೇಗೌಡ, ಶಿಕ್ಷಕರಾದ ಲೋಕೇಶ್, ಗಿರೀಶ್, ಮಹೇಶ್, ಜಿ.ಟಿ. ರಾಮೇಗೌಡ, ಲಕ್ಷ್ಮೀಕಾಂತ್, ಜಗದೀಶ್ ಇದ್ದರು.

Tuesday, February 5, 2013

ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ


ಮಾನ್ಯರೇ

    ವಿಷಯ: ಶಿಕ್ಷಣ ಶಿಲ್ಪಿ ಪತ್ರಿಕೆಯ ಬಿಡುಗಡೆ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ ಕಾರ್ಯಕ್ರಮಕ್ಕೆ ಆಗಮಿಸುವ ಬಗ್ಗೆ.
ತಮಗೆ ಈಗಾಗಲೇ ತಿಳಿದಿರುವಂತೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು “ಶಿಕ್ಷಣಶಿಲ್ಪಿ” ಎಂಬ ಶೈಕ್ಷಣಿಕ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದು ಪತ್ರಿಕೆಯ ಪ್ರಾರಂಭೋತ್ಸವ ಹಾಗೂ ರಾಜ್ಯಮಟ್ಟದ “ಶೈಕ್ಷಣಿಕ ಸಮ್ಮಿಲನ”À ಕಾರ್ಯಕ್ರಮವನ್ನು ದಿನಾಂಕ 16 ಮತ್ತು 17 ಫೆಬ್ರವರಿ 2013 ರಂದು ಕೆ.ಆರ್.ನಗರದಲ್ಲಿ ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿವರಗಳಿಗಾಗಿ ಕರಪತ್ರಗಳನ್ನು ಕಳಿಸುತ್ತಿದ್ದೇವೆ.

ತಾವು ಈ ಕರಪತ್ರಗಳನ್ನು ತಮ್ಮ ಗೆಳೆಯರು, ಕೆಜೆವಿಎಸ್ ಸದಸ್ಯರು, ಕರಾವಿಪ ಸದಸ್ಯರು, ಶಿಕ್ಷಣಾಸಕ್ತರು, ಎಸ್‍ಡಿಎಂಸಿ ಸದಸ್ಯರು, ಎನ್.ಜಿ.ಒ ಪ್ರತಿನಿಧಿಗಳಿಗೆ ನೀಡಿ ಅವರನ್ನು ಕಾರ್ಯಕ್ರಮಕ್ಕೆ ಪ್ರತಿನಿಧಿಗಳಾಗಿ ನೊಂದಾಯಿಸಲು ಕೋರಿದೆ. ಪ್ರತಿನಿಧಿಗಳು 200ರೂಗಳನ್ನು ನೀಡಿ ನೊಂದಾಯಿಸಿಕೊಳ್ಳಬೇಕು. ನೊಂದಾಯಿಸಲು ಈ ಪತ್ರದೊಂದಿಗೆ ರಶೀದಿ ಪುಸ್ತಕವನ್ನು ಕಳಿಸಲಾಗಿದೆ. ಅವರಿಗೆ ಒಂದು ಬ್ಯಾಗ್, ಪೆನ್, ಪ್ಯಾಡ್ ಜೊತೆಗೆ ಊಟ, ವಸತಿಯ ವ್ಯವಸ್ಥೆಯನ್ನು ಮಾಡಲಾಗುವುದು. ಪ್ರತಿನಿಧಿಗಳು ತಮ್ಮ ಪ್ರಯಾಣದ ವ್ಯವಸ್ಥೆಯನ್ನು ಮಾಡಿಕೊಂಡು ಬರಬೇಕಾಗುತ್ತದೆ. ಶಿಕ್ಷಕರಿಗೆ ಒ.ಒ.ಡಿ ಸೌಲಭ್ಯವಿದ್ದು  ಪ್ರತಿಯನ್ನು ಲಗತ್ತಿಸಿದೆ.

ಈಗಾಗಲೇ ರಾಜ್ಯದಾದ್ಯಂತ ಸುಮಾರು 300 ಪ್ರತಿನಿಧಿಗಳು ನೊಂದಾಯಿಸಿಕೊಂಡಿರುವ ವರದಿಯಿದೆ. ದಾವಣಗೆರೆ ಜಿಲ್ಲೆ  ಹರಪನಹಳ್ಳಿ ತಾಲೂಕಿನಿಂದ 50 ಪ್ರತಿನಿಧಿಗಳು ಒಂದು ಬಸ್ ಮಾಡಿಕೊಂಡು ಬರುತ್ತಿದ್ದಾರೆ. ಧಾರವಾಡ ತಾಲೂಕಿನವರು ಒಂದು ಜಿಪ್ ಮಾಡಿಕೊಂಡು ಬರುತ್ತಿದ್ದಾರೆ. ತಮ್ಮ ಜಿಲ್ಲೆ/ತಾಲೂಕಿನಿಂದ ಹೆಚ್ಚು ಪ್ರತಿನಿಧಿಗಳನ್ನು ನೊಂದಾಯಿಸಿ ಕರೆದುಕೊಂಡು ಬರಲು ಕೊರಿದೆ. ಸುಮಾರು 1000 ಪ್ರತಿನಿಧಿಗಳಿಗೆ ಮಾತ್ರ ಅವಕಾಶ ಮಾಡಲು ಸಾಧ್ಯವಿರುವ ಕಾರಣ ತಾವು ನೊಂದಾಯಿಸಿದ ಕೂಡಲೇ ರಾಜ್ಯ ಕೇಂದ್ರಕ್ಕೆ ತಿಳಿಸಲು ಕೋರಿದೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಮುಂದಿನ ಶನಿವಾರ ನಿಮಗೆಲ್ಲ ಕಳಿಸಿಕೊಡಲಾಗುವುದು.

ಧಾರವಾಡ, ಬೆಳಗಾವಿ, ಗದಗ್, ಬಿಜಾಪುರ, ಬಾಗಲಕೋಟೆ, ಹಾವೇರಿ, ದಾವಣಗೆರೆ ಜಿಲ್ಲೆಗಳವರು ಧಾರವಾಡ-ಮೈಸೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಬರಬಹುದು. ಶಿವಮೊಗ್ಬದವರು ಶಿವಮೊಗ್ಗ-ಮೈಸೂರು ರೈಲಿನಲ್ಲಿ, ಮಂಗಳೂರು, ಉಡುಪಿ ಕಡೆಯಿಂದ ಬರುವವರು ಕಣ್ಣೂರು-ಯಶವಂತಪುರ ರೈಲಿನಲ್ಲಿ, ಬೀದರ್, ಗುಲ್ಬರ್ಗ, ರಾಯಚೂರು, ಬಳ್ಳಾರಿ ಜಿಲ್ಲೆಯವರು ಬೆಂಗಳೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ಮೈಸೂರಿಗೆ ಬರಬಹುದು.

ಕೆ.ಆರ್.ನಗರದ ಮಾಹಿತಿಗಾಗಿ: ಶ್ರೀ ಕೆ.ಹೆಚ್.ಗಿರೀಶ್-9731136918, ಎಂ.ಎಸ್.ಲಕ್ಷ್ಮೀಕಾಂತ್-9448780357, ಆನಂದ್-8722393456, ಕೆ.ಬಿ.ವಿಶ್ವನಾಥ್-8880603038 ಇವರುಗಳನ್ನು ಸಂಪರ್ಕಿಸಲು ಕೋರಿದೆ.

ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
                                                                           ಈ.ಬಸವರಾಜು
ಕಾರ್ಯದರ್ಶಿ