Thursday, December 27, 2012

KJVS News-ಸಂಪಾದಕೀಯ








ದೈನಂದಿನ ಆಗುಹೋಗುಗಳ ಬಗ್ಗೆ ಸಾರ್ವತ್ರಿಕವಾಗಿ ವಿಚಾರ ವಿನಿಮಯ ಪ್ರಜಾತ್ತಾತ್ಮಕ ವ್ಯವಸ್ಥೆಯಲ್ಲಿ ಸಹಜವೇ. ನಮ್ಮ ಬದುಕಿನ ಉದ್ದಗಲಕ್ಕೂ ಕಂಪ್ಯೂಟರ್ ಮತ್ತು ಅಂತರ್ಜಾಲವು ಹೆಣೆದುಕೊಂಡಿದೆ. ಫೇಸ್‍ಬುಕ್‍ನಲ್ಲಿ ಅಭಿಪ್ರಾಯ ಮಂಡನೆ ಮಾಡುವುದು, ಸಾರ್ವಜನಿಕವಾಗಿ ಚರ್ಚಿಸುವುದು ಸರ್ವೇಸಾಮಾನ್ಯ. ಇತ್ತೀಚೆಗೆ ಮುಂಬೈನಲ್ಲಿ ಇಬ್ಬರು ಹೆಣ್ಣುಮಕ್ಕಳು ತಮ್ಮ ಅಭಿಪ್ರಾಯವನ್ನು ಫೇಸ್‍ಬುಕ್‍ನಲ್ಲಿ ಚರ್ಚಿಸಿದ ವಿಷಯವು ಈಗ ಐಟಿ ಕಾಯ್ದೆಯನ್ನೇ ಬದಲಿಸುವ ಚರ್ಚೆಗೆ ಪೀಠಿಕೆ ಆಗಿದೆ.
ಎರಡು ಗುಂಪುಗಳ ನಡುವೆ ಗಲಭೆಗೆ ಪ್ರಚೋದನೆ ನೀಡಿದರು ಎಂಬ ಕಾರಣ ನೀಡಿ ಹಲವು ಕಲಂನಡಿಯಲ್ಲಿ ಈ ಇಬ್ಬರು ಹೆಣ್ಣುಮಕ್ಕಳ ಮೇಲೆ ಕೇಸು ಜಡಿಯಲಾಗಿದೆ. ತತ್ಪರಿಣಾಮವಾಗಿ ಭುಗಿಲೆದ್ದ ಚರ್ಚೆ, ಸರ್ವೋಚ್ಛ ನ್ಯಾಯಾಲದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಾಗಿ ಪರಿಣಮಿಸಿ, ಮಾಹಿತಿ ತಂತ್ರಜ್ಞಾನ ಅಧಿನಿಯಮದ ಸೆಕ್ಷನ್ 66 ಮತ್ತು 67ಗಳು ಸಂವಿಧಾನದಲ್ಲಿ ನೀಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕುತ್ತಾಗಿರುವುದರಿಂದ, ಈ ಸೆಕ್ಷನ್‍ಗಳು ತಿದ್ದುಪಡಿ ಆಗಬೇಕೆಂಬ ಅಭಿಪ್ರಾಯ ರೂಪುಗೊಳ್ಳುತ್ತಿದೆ. ಅಂದರೆ ತಂತ್ರಜ್ಞಾನದ ಬಳಕೆ, ಸಾರ್ವಜನಿಕರ ಹಕ್ಕುಗಳು ಹಾಗೂ ಕಾನೂನುಗಳು ಮಾರ್ಪಾಡಾಗುವುದಕ್ಕೆ ಸಂಬಂಧವಿದೆ ಎಂಬುದೇ ಇಲ್ಲಿರುವ ಪಾಠ.

ನಮ್ಮ ದೇಶದ ಸಂವಿಧಾನದ ಪರಿಚ್ಛೇಧ 51ಎ(ಎಚ್) ಪ್ರಕಾರ, ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದಿದೆ. ಜನತೆಯಲ್ಲಿ ಮಾಹಿತಿ ಸಂವವಹನ, ಮನರಂಜನೆ ಮತ್ತು ಶಿಕ್ಷಣದ ಉದ್ದೇಶವಿರಬೇಕಿರುವ ಮಾಧ್ಯಮಗಳು, ಕೇವಲ ಮಾಹಿತಿ ಮತ್ತು ಮನರಂಜನೆ ಮಾರಾಟದಲ್ಲಿ ತೊಡಗಿವೆ. ಆದರೆ ಮಾಧ್ಯಮಗಳು ವೈಜ್ಞಾನಿಕ ಮನೋಭಾವವನ್ನು ಜನತೆಯಲ್ಲಿ ರೂಪಿಸುವ ಮಾತಿರಲಿ, ವಾಸ್ತು, ಹೋಮ, ಶಾಂತಿ, ಪ್ರಳಯ ಇತ್ಯಾದಿ ಬಗೆ ಬಗೆಯ ಮೌಢ್ಯವನ್ನು ಬಿತ್ತುವಲ್ಲಿ ಮುಳುಗಿಹೋಗಿವೆ. ಟಿವಿ ವಾಹಿನಿಗಳಂತೂ ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿ ಹೋಗಿದೆ. ಮಾಧ್ಯಮದಲ್ಲಿ ಎಲ್ಲರೂ ಈ ದಂಧೆಯಲ್ಲಿ ತೊಡಗಿಲ್ಲವೆಂಬುದು ಆಶಾದಾಯಕ ವಿಚಾರವೇನೋ ಸರಿ.
ಕೆಲವಾದರೂ ಇಂಗ್ಲಿಷ್ ವಾಹಿನಿಗಳು ಪರಿಸರ ಪ್ರಜ್ಞೆ, ವೈಜ್ಞಾನಿಕ ಮನೋಭಾವ, ವೈಚಾರಿಕತೆಯ ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆ. ಆದರೆ ಈ ಕಾರ್ಯಕ್ರಮಗಳನ್ನು ಡಬ್ಬಿಂಗ್ ಮಾಡಬಾರದೆಂದು ಕನ್ನಡದ ಗುತ್ತಿಗೆ ಪಡೆದಿರುವ ಉದ್ಯಮಪತಿಗಳು ಧಮಕಿ ಹಾಕಿದ್ದಾರೆ.

ಆದರೆ, ಈ ವಿಷಯವೂ ಸ್ಪರ್ಧಾ ಆಯೋಗ (ಕಾಂಪಿಟೇಷ ನ್ ಕಮಿಷನ್ ಅಫ್ ಇಂಡಿಯಾ)ದಿಂದ ಚಲನಚಿತ್ರ ಮತ್ತು ವಾಣಿಜ್ಯ ಮಂಡಲಿಗೆ ನೋಟೀಸ್ ಬರಲು ಕಾರಣವಾಗಿದೆ. ಅತ್ತೆ-ಸೊಸೆ ಜಗಳ ಮತ್ತು ಹೆಂಗಸರನ್ನು ನಿರಂತರವಾಗಿ ಅಳಿಸುವ ಧಾರಾವಾಹಿಗಳು ಡಬ್ಬಿಂಗ್ ಮಾಡುವ ಅಗತ್ಯವಿಲ್ಲ, ಯಾಕೆಂದರೆ ಅನ್ಯಭಾಷಿಕರಿಗಿಂತ ನಮ್ಮ ನಿರ್ಮಾಪಕರೇ ಚೆನ್ನಾಗಿ ಅಳಿಸುತ್ತಾರೆಂಬುದನ್ನು ಒಪ್ಪೋಣ. ಆದರೆ, ದಟ್ಟ ಅಡವಿಗಳಲ್ಲಿ ಹೋಗಿ ವರ್ಷಗಟ್ಟಲೆ ಶ್ರಮಿಸಿ ಚಿತ್ರಿಸಿದ ವನ್ಯಜೀವಿ ಚಿತ್ರಗಳನ್ನು, ಕೈಗಾರಿಕೆಗಳಲ್ಲಿ ನಡೆಯುವ ಉತ್ಪಾದನೆಯ ಸಾಕ್ಷ್ಯಚಿತ್ರಗಳಿಗೆ ಧ್ವನಿಯನ್ನು ಡಬ್ ಮಾಡಿದರೆ, ಕನ್ನಡಿಗರಿಗೆ ಉತ್ಕೃಷ್ಟ ಕಲಾ-ವೈಜ್ಞಾನಿಕ ಚಿತ್ರಗಳಿಗೆ ತಮ್ಮ ಭಾಷೆಯಲ್ಲೇ ತಿಳಿಯುವ ಅವಕಾಶವಾಗುತ್ತದೆ.

ತಮಿಳುನಾಡಿನ ಜನರಿಗೆ ಈ ಭಾಗ್ಯವಿದೆ. ಅಲ್ಲಿ ಬಿಬಿಸಿ, ನ್ಯಾಷನಲ್ ಜಿಯೋಗ್ರಾಫಿಕ್ ವಾಹಿನಿಗಳ ಕಾರ್ಯಕ್ರಮಗಳು ತಮಿಳು ಧ್ವನಿಯಲ್ಲಿ ಮೂಡಿಬರುತ್ತಿವೆ. ಕನ್ನಡದ ನಿರ್ಮಾಪಕರು ಆ ಗುಣಮಟ್ಟದ ಕಾರ್ಯಕ್ರಮಗಳನ್ನು ಮಾಡಲಾರರು, ಡಬ್ಬಿಂಗ್ ಮಾಡಲು ಬಿಡಲಾರರು.

ವೈಜ್ಞಾನಿಕ ಮನೋಭಾವವನ್ನು ರೂಪಿಸುವ ಸೆಲೆಗಳನ್ನೇ ಚಿವುಟಿ ಹಾಕಿದರೆ, ವಾಸ್ತು, ಪ್ರಳಯ ಇತ್ಯಾದಿ ಗೊಬ್ಬರಗಳನ್ನು ನಮ್ಮ ಜನರಿಗೆ ತಿನ್ನಿಸುವುದನ್ನು ಅವ್ಯಾಹತವಾಗಿ ಮುಂದುವರಿಸಬಹುದಲ್ಲವೆ? ಮಾಧ್ಯಮದ ಮಿತ್ರರಿಗೆ ಬಾಯಿ ದೊಡ್ಡದು, ಕಿವಿ ತುಂಬ ಚಿಕ್ಕದು ಎಂಬ ಆರೋಪವಂತೂ ಇದೆ. ಯಾರಾದರೂ ಕೇಳಿಸಿಕೊಳ್ಳುತ್ತಿದ್ದಾರೆಯೇ?

No comments:

Post a Comment