Friday, September 28, 2012

ಚಿದಂಬರಯ್ಯನವರ ಅಕಾಲಿಕ ಅಗಲಿಕೆ --ಈ.ನಂಜಪ್ಪ

ಆತ್ಮೀಯರೆ,

ದಿ.ಚಿದಂಬರಯ್ಯನವರ ಅಕಾಲಿಕ ಅಗಲಿಕೆ ಬಗ್ಗೆ ತಿಳಿದು ಮನಸ್ಸಿಗೆ ನೋವಾಗಿದೆ.

 ಚಿದಂಬರಯ್ಯನವರು,  ಉಪಾಧ್ಯಕ್ಷರು, KJVS

ನನಗೆ ಚಿದಂಬರಯ್ಯನವರು ತೀರಾ ಪರಿಚಿತರೇನಲ್ಲ. ಕೇವಲ 4 ತಿಂಗಳ ಹಿಂದಿನವರೆಗೆ ನಾನು ಅವರ ಹೆಸರನ್ನು ಕೇಳಿದ್ದೆನಷ್ಟೆ.ಜನ ವಿಜ್ಞಾನ ಚಳುವಳಿಯ ಒಂದು ಸಂಘಟನೆಯಲ್ಲುಂಟಾದ ದುರಾಡಳಿತದಿಂದ ಬೇಸತ್ತ ಕೆಲವರು ಸಮಾನ ಮನಸ್ಕರ ತೀರ್ಮಾನದಂತೆ ಮಾರ್ಚ್ ತಿಂಗಳಲ್ಲಿ ಕೆ.ಜೆ.ವಿ.ಎಸ್. ಸಂಘಟನೆ ಶುರುವಾಯಿತು. ಮೇ 13 ರಂದು 2ನೇ (ಮೊದಲನೆಯದೇ ಇರಬಹುದು)ಕಾರ್ಯಕಾರಿ ಸಮಿತಿ ಸಭೆಯನ್ನು ತುಮಕೂರಿನಲ್ಲಿ ಆಯೋಜಿಸಲಾಯಿತು. ಈ ಸಭೆಯಲ್ಲಿ ನನಗೆ ಚಿದಂಬರಯ್ಯನವರನ್ನು ಮೊದಲ ಬಾರಿಗೆ ವಿದ್ಯುಕ್ತವಾಗಿ ಪರಿಚಯಿಸಲಾಯಿತು. ವಾಸ್ತವಿಕವಾಗಿ ಆ ಸಭೆಯನ್ನು ತುಮಕೂರಿನಲ್ಲಿ ಆಯೋಜಿಸಲು ಅವರ ಒತ್ತಾಸೆ ಮತ್ತು ಬೆಂಬಲವೇ ಕಾರಣವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ.

ಮೊದಲ ಭೇಟಿಯಲ್ಲೇ ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವುದೋ ರೀತಿಯ ಗೌರವ ಭಾವನೆ ಉಂಟಾಯಿತು. ಅವರ ಸರಳತೆ, ಸಜ್ಜನಿಕೆ, ಸ್ನೇಹಪರ ವ್ಯಕ್ತಿತ್ವ ನನ್ನನ್ನು ಆಕರ್ಷಿಸಿತ್ತು ಎಂದರೆ ತಪ್ಪಾಗಲಾರದು. ಸಭೆಯಲ್ಲಿ ಕೆ.ಜೆ.ವಿ.ಎಸ್. ಸಂಘಟನೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನನ್ನನ್ನು ಮತ್ತು ಚಿದಂಬರಯ್ಯನವರನ್ನು ಉಪಾಧ್ಯಕ್ಷರೆಂದು ನೇಮಕ ಮಾಡಲಾಯಿತು. ಈ. ಬಸವರಾಜು ರವರು ನಮ್ಮನ್ನು ಸಭೆಗೆ ಪರಿಚಯಿಸಿದರು. ಆಗ ಚಿದಂಬರಯ್ಯನವರು ಮಾತನಾಡಿ, ನಾನು ಮತ್ತು ಅವರು ಹಾಸನದಲ್ಲಿ ನಡೆದ ಶೈಕ್ಷಣಿಕ ಹಬ್ಬದ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡಿದ್ದನ್ನು ಸ್ಮರಿಸುತ್ತಾ ಅವರಿಗೆ ನನ್ನ ಪರಿಚಯ ಇರುವುದಾಗಿ ಸಭೆಗೆ ತಿಳಿಸಿದರು. ಅಲ್ಲದೆ ನನ್ನ ಬಗ್ಗೆ ಕೆಲವು ಅಭಿಮಾನದ ಮಾತುಗಳನ್ನಾಡಿದರು. ನನಗೆ ಇದರಿಂದ ಮುಜುಗರವಾದರೂ ಅವರ ಬಗ್ಗೆ ಮನಸ್ಸಿನಲ್ಲಿ ಗೌರವ ಭಾವನೆ ಮೂಡಿಬಂದಿತ್ತು. ಏಕೆಂದರೆ ನನಗೆ ಆ ಬಗ್ಗೆ (ಹಾಸನದ ಕಾ ರ್ಯಕ್ರಮದ ಬಗ್ಗೆ) ನೆನಪಿರಲಿಲ್ಲ! ಇದಾದ ಮೇಲೆ ಮತ್ತೊಂದು ಸಭೆಯನ್ನು ತುಮಕೂರಿನಲ್ಲಿಯೇ ನಡೆಸಲಾಯಿತು. ಆಗ ಅವರ-ನನ್ನ ಎರಡನೇ ಭೇಟಿ. ಅವರ-ನನ್ನ ಮೂರನೇ ಭೇಟಿಗೆ ಕಾಲ ಕೂಡಿ ಬರಲೇಇಲ್ಲ! ಇದಕ್ಕೆ ವಿಧಿ ವಿಲಾಸ ಎನ್ನಬಹುದು.

ಕೆ.ಜೆ.ವಿ.ಎಸ್. ಸಂಘಟನೆಯಲ್ಲಿ ಸಹ ಉಪಾಧ್ಯಕ್ಷರಾಗಿ ನಾವು ಇನ್ನೂ ಹಲವು ಬಾರಿ ಸಂಧಿಸಬಹುದು ಎಂಬ ನನ್ನ ನಿರೀಕ್ಷೆ ಹುಸಿಯಾಗಿದೆ. ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಮನಸ್ಸಿಗೆ ಆಘಾತವಾಗಿದೆ. ಅವರ ಪತ್ನಿ ಮೊದಲೇ ಇಹಲೋಕ ತ್ಯಜಿಸಿದ್ದರೆಂದು ತಿಳಿಯಿತು. ಬಹುಶಃ ಅವರ ಕರೆಯಂತೆ ಇವರು  ಇಷ್ಟು ಬೇಗನೆ ಆ ಲೋಕಕ್ಕೆ ತೆರಳಿರಬಹುದೇ? ಏಕೆಂದರೆ ಸಾಮಾನ್ಯವಾಗಿ 65-70 ಸಾಯುವ ವಯಸ್ಸಲ್ಲ.

ಏನೇ ಆಗಲಿ ಚಿದಂಬರಯ್ಯನವರ ಅಗಲಿಕೆ ಅವರ ಕುಟುಂಬವರ್ಗದವರಿಗೆ ಮತ್ತು ಅವರ ಸ್ನೇಹಿತವರ್ಗಕ್ಕಷ್ಟೇ ಅಲ್ಲದೆ ಕೆ.ಜೆ.ವಿ.ಎಸ್. ಸಂಘಟನೆಗೆ ಸಹ ತುಂಬಲಾರದ ನಷ್ಟವಾಗಿದೆ.

ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಮತ್ತು ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬವರ್ಗದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

-ಈ.ನಂಜಪ್ಪ

No comments:

Post a Comment