Friday, September 28, 2012

ಚಿದಂಬರಯ್ಯನವರಿಗೆ ಶ್ರದ್ಧಾಂಜಲಿ



ಅಕಾಲದಲ್ಲಿ ನಮ್ಮನಗಲಿದ ಚಿದಂಬರಯ್ಯನವರು


File  Photo  of  KJVS Execom Meeting held at Tumkur in March 2012 
 in which Sri BA Chidambaraiah participated.



ದಿನಾಂಕ ೨೬.೦೯.೨೦೧೨ರ ಬೆಳಿಗ್ಗೆ ನಮಗೆ ಶುಭೋದಯವಾಗಿರಲಿಲ್ಲ. ಗೆಳೆಯ ಬಿ.ಉಮೇಶ್ ಅವರು ಕರೆ ಮಾಡಿ ಚಿದಂಬರಯ್ಯನವರು ತೀರಿಕೊಂಡ್ರಂತೆ? ನಿಜವ? ಎಂದರು. ಅವರಿಗೆ ಇನ್ನೂ ಖಾತರಿಯಾಗಿರಲಿಲ್ಲ. ತಕ್ಷಣ ನಾನು ಚಿದಂಬರಯ್ಯ ಅವರ ಮೊಬೈಲ್ ಗೆ ಕರೆ ಮಾಡಿದೆ. ಅವರ ಸೊಸೆ ತೆಗೆದುಕೊಂಡು ಹೌದು ಎಂದು ದುಃಖಿತರಾದರು. ಇದನ್ನು ನಿರೀಕ್ಷಿಸಿರದ ನನಗೆ ಆಘಾತವಾಯ್ತು. ಕಡೆಗೂ ಅವರು ನಮ್ಮನ್ನು ಬಿಟ್ಟು ದೂರ ಹೋಗಿದ್ದರು.

೧೯೯೦ರ ಪ್ರಾರಂಭದಲ್ಲಿ ನಾವು ಭಾರತ ಜ್ಞಾನ ವಿಜ್ಞಾನ ಜಾಥಾ ಸಂಘಟಿಸಬೇಕಾದಾಗ ಅದಕ್ಕೊಂದು ಸ್ವಾಗತ ಸಮಿತಿ ರಚಿಸಬೇಕಿತ್ತು. ಆಗ ನಮ್ಮೊಂದಿಗೆ ಸೇರಿಕೊಂಡು ಅದರ ಅಧ್ಯಕ್ಷತೆ ವಹಿಸಿಕೊಂಡವರು ಶ್ರೀ ಬಿ.ಎ.ಚಿದರಂಬರಯ್ಯ ನವರು. ಮೊದಲ ಸಭೆ ಅವರ ಮನೆಯಲ್ಲಿಯೇ ನಡೆಯಿತು. ಅಂದು ಪ್ರಾರಂಭವಾದ ಅವರ ಆತಿಥ್ಯ ಇಂದಿಗೂ ಹಾಗೆಯೇ ಮುಂದುವರೆದಿದೆ. ಭಾರತ ಜ್ಞಾನ ವಿಜ್ಞಾನ ಜಾಥಾ ಅಕ್ಟೋಬರ್ ೨ ರಿಂದ ನವೆಂಬರ್ ೧೪ರ ವರೆಗೆ ತುಮಕೂರು ಜಿಲ್ಲೆಯಲ್ಲಿ ೪೫ ದಿನಗಳ ಕಾಲ ಸುಮಾರು ೧೨೦ ಪ್ರದರ್ಶನ ನೀಡಿತು. ಅದಕ್ಕೆ ಅಗತ್ಯವಾದ ತಯಾರಿಗೆ ನೆರವಾಗುವುದರ ಜೊತೆಗೆ ಪ್ರತಿ ವಾರಕ್ಕೊಮ್ಮೆ ಜಾಥಾ ಇರುವ ಸ್ಥಳಕ್ಕೆ ಕುಟುಂಬ ಸಮೇತರಾಗಿ ಅವರು ಬರುತ್ತಿದ್ದರು. ಬರುವಾಗ ಜಾಥಾ ತಂಡದಲ್ಲಿದ್ದ ಕಾರ್ಯಕರ್ತರು ಹಾಗೂ ಕಲಾವಿದರಿಗೆ ಕಜ್ಜಾಯ ಹಾಗೂ ಇತರೆ ಸಿಹಿ ತಿನಿಸುಗಳನ್ನು ತರುತ್ತಿದ್ದರು. ಜಾಥಾ ಸಮಾರೋಪ ಆದ ನಂತರ ಅದರ ಬಗ್ಗೆ ನವೀನ್ ಎಸ್ಟೇಟ್ ನಲ್ಲಿ ಒಂದು ಸಭೆ ಏರ್ಪಡಿಸಿ ಎಲ್ಲ ಕಾರ್ಯಕರ್ತರಿಗೂ ಊಟ ಹಾಕಿಸಿ ಉತ್ಸಾಹ ತುಂಬಿದ್ದರು.

ಜಾಥಾದೊಂದಿಗೆ ಪ್ರಾರಂಭಗೊಂಡ ನಮ್ಮ ಸಂಬಂಧ ಎಂದೂ ಯಾವ ಕಾರಣಕ್ಕೂ ತೊಂದರೆಗೆ ಸಿಲುಕಲಿಲ್ಲ. ಅದೇ ಉತ್ಸಾಹ ಹಾಗೂ ಪ್ರೀತಿಯಿಂದ ನಿರಂತರವಾಗಿ ಅವರು ತುಮಕೂರು ವಿಜ್ಞಾನ ಕೇಂದ್ರ, ಭಾರತ ಜ್ಞಾನ ವಿಜ್ಞಾನ ಸಮಿತಿಗೆ ತಮ್ಮ ಕೈಲಾದ ಎಲ್ಲ ನೆರವನ್ನೂ ನೀಡಿ ದುಡಿದರು. ಅವರ ನವೀನ್ ಎಸ್ಟೇಟ್ ನಮ್ಮ ಅನೇಕ ಕಾರ್ಯಕ್ರಮಗಳಿಗೆ ತಾಣವಾಯಿತು. ೧೯೯೩ರಲ್ಲಿ ನಡೆದ ರಾಷ್ಟ್ರಮಟ್ಟದ ಮಹಿಳಾ ಕಲಾ ಜಾಥಾ ತುಮಕೂರಿಗೆ ಆಗಮಿಸಿದಾಗ ಅದರ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಚಂದ್ರ ಚಿದಂಬರಯ್ಯ ಕಾರ್ಯನಿರ್ವಹಿಸಿದರು. ೨೦೦೩ರಲ್ಲಿ ನಾವು ಸಂಘಟಿಸಿದ್ದ ಪ್ರಥಮ ಶೈಕ್ಷಣಿಕ ಸಮಾವೇಶಕ್ಕೆ ಚಿದಂಬರಯ್ಯನವರದೇ ಧೈರ್ಯ ಹಾಗೂ ಸಾರಥ್ಯ. ಆ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ವಿನಾಕಾರಣ ನಮಗೆ ವಿರೋಧಿಯಾದರೂ ಸಹ ಅದ್ಯಾವುದನ್ನೂ ಲೆಕ್ಕಿಸದೇ ನಮ್ಮೊಂದಿಗೆ ನಿಂತು ಆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದವರು ಚಿದಂಬರಯ್ಯನವರು.

ಅವರ ಶ್ರೀಮತಿಯವರಾದ ಚಂದ್ರಚಿದಂಬರಯ್ಯ ಅವರೂ ಸಹ ಬಿಜಿವಿಎಸ್ ನ ಪ್ರಥಮ ರಾಜ್ಯ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದರು. ಸಮತಾ ಸಂಚಾಲಕರಾಗಿದ್ದರು. ನಮಗೆಲ್ಲಾ ಚಂದ್ರಕ್ಕ ಆಗಿದ್ದರು. ಸದಾ ನಗುವಿನೊಂದಿಗೆ ನಮ್ಮನ್ನು ಸ್ವಾಗತಿಸುತ್ತಿದ್ದರು. ಇದು ಕೇವಲ ನಮ್ಮ ಅನುಭವ ಮಾತ್ರವಲ್ಲ. ಅವರ ಮನೆಗೆ ಭೇಟಿ ನೀಡಿರುವ ಎಲ್ಲರ ಅಭಿಪ್ರಾಯವು ಇದೇ ಆಗಿದೆ. 

ಕೆಲವು ಸಂಘಟನಾತ್ಮಕ ಕಾರಣಗಳಿಂದಾಗಿ ಅನಿವಾರ್ಯವಾಗಿ ನಾವು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಚಿಸುವ ನಿರ್ಧಾರಕ್ಕೆ ಬಂದೆವು. ಅದರ ಸಂಬಂಧವಾಗಿ ಅವರ ಮನೆಯಲ್ಲಿ ನಾವು ಸಾಕಷ್ಟು ಸಲ ಚರ್ಚೆ ನಡೆಸಿದ್ದೆವು. ಕಡೆಗೆ ಅವರು ನಿಂತದ್ದು ನಮ್ಮೊಂದಿಗೆ. ಯಾವುದು ಸರಿ, ಯಾವುದು ತಪ್ಪು ಅನ್ನೋದು ನನಗೆ ಗೊತ್ತಾಗಿದೆ, ಇದನ್ನು ಬೆಳೆಸೋಣ ನಿಮ್ಮೊಂದಿಗಿರುವೆ ಎಂದರು. ರಾಜ್ಯ ಸಮಿತಿಯ ಉಪಾಧ್ಯಕ್ಷರಾಗಿರಿ ಎಂದು ನಾವು ಕೇಳಿಕೊಂಡಾಗ ನನ್ನ ಆರೋಗ್ಯ ಸರಿ ಇಲ್ಲ, ಆದರೂ ನಿಮ್ಮ ಇಷ್ಟದಂತೆ ಇರುತ್ತೇನೆ ಎಂದು ಹೇಳಿದ ಅವರು ಅನೇಕ ಉಪಯುಕ್ತವಾದ ಸಲಹೆಗಳನ್ನು ನಮಗೆ ನೀಡಿದರು.

ಸತತ ೨೨ ವರ್ಷಗಳ ನಿರಂತರ ಸಂಪರ್ಕದಲ್ಲಿದ್ದ ಅವರನ್ನು ಮರೆಯೋದು ಅಷ್ಟು ಸುಲಭ ಅಲ್ಲ. ಅವರು ಇಷ್ಟು ಬೇಗನೆ ನಮ್ಮನ್ನಗಲುತ್ತಾರೆ ಅನ್ನುವ ಯಾವುದೇ ಸೂಚನೆ ನಮಗಿರಲಿಲ್ಲ. ಚಂದ್ರಕ್ಕ ಅವರ ನಿಧನದ ನಂತರ ಅವರು ತುಂಬಾ ನೊಂದಿದ್ದರು ಎಂಬುದು ನಮಗೆ ತಿಳಿದಿತ್ತಾದರೂ, ಈ ರೀತಿ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಅವರ ಅಗತ್ಯ ನಮಗೂ ಇತ್ತು, ಅವರ ಕುಟುಂಬಕ್ಕೂ ತುಂಬಾ ಇತ್ತು ಎಂಬುದನ್ನು ಹೇಳಬೇಕಾಗಿಲ್ಲ. ಕಳೆದ ವಾರವಷ್ಟೇ ದೂರವಾಣಿ ಕರೆ ಮಾಡಿ ನಾನು ಪದಾಧಿಕಾರಿಗಳ ಸಭೆಗೆ ಬರಲಾಗಲಿಲ್ಲ, ಏನೂ ತಿಳಿದುಕೊಳ್ಳಬೇಡಿ. ನಾನು ಸದಾ ನಿಮ್ಮೊಂದಿಗಿದ್ದೇನೆ, ಒಮ್ಮೆ ಭೇಟಿಯಾಗೋಣ, ಏನೋ ಹೇಳುವುದಿದೆ ಎಂದರು. ಅದೇನೆಂದು ಕೇಳುವ ಆತುರವನ್ನು ನಾನು ಮಾಡಲಿಲ್ಲ. ಅದೇ ನಾನು ಅವರೊಂದಿಗೆ ಕಡೆಯದಾಗಿ ಮಾತಾಡಿದ್ದು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಒಬ್ಬ ಒಳ್ಳೆಯ, ಸಹೃದಯ ಪೋಷಕರೊಬ್ಬರನ್ನು ಕಳೆದುಕೊಂಡಿದೆ. ಅವರು ನಮ್ಮ ದೊಡ್ಡ ಕುಟುಂಬಕ್ಕೆ ಮುಖ್ಯಸ್ಥರಂತಿದ್ದರು. ಸಂಪೂರ್ಣ ನಿಸ್ವಾರ್ಥದಿಂದ ದುಡಿದ ಅವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ. ನಾವಿರುವ ತನಕ ಅವರು ನಮ್ಮೊಂದಿಗಿರುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ಚಿದಂಬರಯ್ಯ ಅವರದು ವೈವಿದ್ಯಮಯ ವ್ಯಕ್ತಿತ್ವ ಎನ್ನುವುದಕ್ಕೆ ಅವರಿಗಿದ್ದ ಸಂಪರ್ಕವೇ ಸಾಕ್ಷಿ. ಅವರು ಒಬ್ಬ ರೈತ, ಒಬ್ಬ ಕೈಗಾರಿಕಾ ಉದ್ಯಮಿ. ಇವೆರಡು ವರ್ಗಗಳ ಸಂಪರ್ಕದ ಜೊತೆಗೆ ಅವರಿಗೆ ಅನೇಕ ರೀತಿಯ ಸಂಪರ್ಕವಿತ್ತು. ತುಮಕೂರಿನ ವಿವಿಧ ಸಂಘಟನೆಗಳು, ಸರ್ಕಾರಿ ಅಧಿಕಾರಿಗಳು, ರಾಜ್ಯದಾದ್ಯಂತ ಪ್ರಗತಿಪರ ಚಿಂತಕರು, ಬರಹಗಾರರು, ಸಾಹಿತಿಗಳು ಹೀಗೆ ಅವರ ಪರಿಚಯದ ಹರವು ವಿಸ್ತಾರವಾಗಿತ್ತು. ಇದಕ್ಕೆ ಕಾರಣವೆಂದರೆ ಇತರರು ಹೇಳುವುದನ್ನು ಗಮನವಿಟ್ಟು ಗೌರವ ಭಾವನೆಯಿಂದ ಕೇಳಿಸಿಕೊಳ್ಳುತಿದ್ದುದೇ ಕಾರಣವಿರಬಹುದು ಎನಿಸುತ್ತದೆ. 

ಪ್ರಜಾವಾಣಿಯ ಖ್ಯಾತ ಅಂಕಣಕಾರರಾದ ಶ್ರೀ ದಿನೇಶ್ ಅಮೀನ್ ಮಟ್ಟು, ಸಾಹಿತಿಗಳಾದ ಡಾ.ಕೆ.ಪುಟ್ಟಸ್ವಾಮಿ, ಡಾ.ಕೆ.ವೈ.ನಾರಾಯಣಸ್ವಾಮಿ, ಅತ್ತಿಹಳ್ಳಿದೇವರಾಜು, ಪ್ರೊ.ಎಸ್.ಜಿ.ಸಿದ್ದರಾಮಯ್ಯ(ಇಲ್ಲಿ ಕೆಲವರ ಹೆಸರನ್ನಷ್ಟೇ ಬರೆದಿದೆ), ಅಧಿಕಾರಿಗಳಾದ ಶ್ರೀ ಸಿದ್ದಯ್ಯ, ಐ.ಆರ್.ಪೆರುಮಾಳ್ ಹೀಗೆ ಚಿದಂಬರಯ್ಯ ಅವರ ಬಳಗ ವಿಸ್ತಾರವಾಗುತ್ತಲೇ ಹೋಗುತ್ತದೆ. ಇತ್ತೀಚೆಗೆ ನಾವು ಶೇಟ್ಟಿಹಳ್ಳಿಪಾಳ್ಯದಲ್ಲಿ ಸಸಿ ನೆಡುವ ಕಾರ್ಯಕ್ರಮ ಮಾಡಿದಾಗ ಚಿದಂಬರಯ್ಯನವರು ಆಗಮಿಸಿ ಒಂದು ಸಂಪಿಗೆ ಸಸಿ ನೆಟ್ಟಿದ್ದರು. ಅದೇ ದಿನ ತುಮಕೂರು ಸ್ಟೇಡಿಯಂ ನಲ್ಲಿ ನಡೆದ ಅಂತಾರಾಷ್ಟ್ರೀಯ ಖ್ಯಾತ ಆಟಗಾರ್ ವಾಲಿಬಾಲ್ ವೀಕ್ಷಿಸಿ ಹಿರಿಯ ಆಟಗಾರರಿಗೆ ಗೌರವವನ್ನು ಸಲ್ಲಿಸಿದ್ದರು.

ಚಿದಂಬರಯ್ಯನವರು ಪುಸ್ತಕ ಪ್ರೇಮಿಯಾಗಿದ್ದರು. ಸ್ವತಃ ಪುಸ್ತಕಗಳನ್ನು ಓದುವುದರ ಜೊತೆಗೆ ಪ್ರಗತಿಪರ ಸಾಹಿತ್ಯ ಅದರಲ್ಲಿಯೂ ಕುವೆಂಪು ಅವರ ಸಾಹಿತ್ಯವನ್ನು ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ನೀಡುವುದರಲ್ಲಿ ಅವರು ತುಂಬಾ ಆಸಕ್ತಿಯನ್ನು ತೋರುತ್ತಿದ್ದರು. ಕ್ಯೂಬಾ ದೇಶಕ್ಕೆ ಅಮೆರಿಕೆ ಹಾಕಿದ್ದ ದಿಗ್ಭಂದನದ ವಿರುದ್ದ ಕ್ಯೂಬಾಕ್ಕೆ ನೆರವು ನೀಡಲು ಒಂದು ಸಮಿತಿ ರಚಿಸಕೊಂಡಿದ್ದೆವು. ಅದಕ್ಕೆ ಚಿದಂಬರಯ್ಯ ಅವರು ಅಧ್ಯಕ್ಷರಾಗಿ ಸಾಕಷ್ಟು ನೆರವು ಸಂಗ್ರಹಿಸಿ ಕಳಿಸಿಕೊಟ್ಟಿದ್ದೆವು. ನಾವು ತೊಡಗಿಸಿಕೊಳ್ಳುವ ಎಲ್ಲ ಕಾರ್ಯಕ್ರಮಗಳಿಗೂ ಅವರು ಬೆಂಬಲವಾಗಿ ನಿಲ್ಲುತ್ತಿದ್ದುದು ಅವರ ದೊಡ್ಡ ತನವಾಗಿತ್ತು.

-ಈ.ಬಸವರಾಜು, ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ


ಸರಳ ಸಜ್ಜನಿಕೆಯ ವ್ಯಕ್ತಿತ್ವ
ನನಗೆ ಚಿದಂಬರಯ್ಯನವರು ತೀರಾ ಪರಿಚಿತರೇನಲ್ಲ. ಕೇವಲ ನಾಲ್ಕು ತಿಂಗಳ ಹಿಂದಿನವರೆಗೆ ನಾನು ಅವರ ಹೆಸರನ್ನು ಕೇಳಿದ್ದೆನಷ್ಟೆ. ಜನ ವಿಜ್ಞಾನ ಚಳುವಳಿಯ ಒಂದು ಸಂಘಟನೆಯಲ್ಲುಂಟಾದ ಬೆಳವಣಿಗೆಯಿಂದ ಬೇಸತ್ತ ಕೆಲವರು ಸಮಾನ ಮನಸ್ಕರ ತೀರ್ಮಾನದಂತೆ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಾರಂಭಗೊಂಡಿತು. ಮಾರ್ಚಿ ೨೫ ರಂದು ಮೊದಲನೆಯ ಕಾರ್ಯಕಾರಿ ಸಮಿತಿ ಸಭೆಯನ್ನು ತುಮಕೂರಿನಲ್ಲಿ ಆಯೋಜಿಸಲಾಗಿತ್ತು.ಈ ಸಭೆಯಲ್ಲಿ ನನಗೆ ಚಿದಂಬರಯ್ಯನವರನ್ನು ಮೊದಲಬಾರಿಗೆ ವಿದ್ಯುಕ್ತವಾಗಿ ಪರಿಚಯಿಸಲಾಯಿತು. ವಾಸ್ತವಿಕವಾಗಿ ಆ ಸಭೆಯನ್ನು ತುಮಕೂರಿನಲ್ಲಿ ಆಯೋಜಿಸಲು ಅವರ ಒತ್ತಾಸೆ ಮತ್ತು ಬೆಂಬಲವೇ ಕಾರಣವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ.
ಮೊದಲ ಭೇಟಿಯಲ್ಲೇ ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವುದೋ ರೀತಿಯ ಗೌರವ ಭಾವನೆ ಉಂಟಾಯಿತು. ಅವರ ಸರಳತೆ, ಸಜ್ಜನಿಕೆ, ಸ್ನೇಹಪರ ವ್ಯಕ್ತಿತ್ವ ನನ್ನನ್ನು ಆಕರ್ಷಿಸಿತ್ತು ಎಂದರೆ ತಪ್ಪಾಗಲಾರದು. ಸಭೆಯಲ್ಲಿ ಕೆ.ಜೆ.ವಿ.ಎಸ್ ಸಂಘಟನೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯ್ತು. ನನ್ನನ್ನು ಮತ್ತು ಚಿದಂಬರಯ್ಯನವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಈ.ಬಸವರಾಜು ಅವರು ನಮ್ಮನ್ನು ಸಭೆಗೆ ಪರಿಚಯಿಸಿದರು. ಆಗ ಚಿದಂಬರಯ್ಯನವರು ಮಾತನಾಡಿ, ನಾನು ಮತ್ತು ಅವರು ಹಾಸನದಲ್ಲಿ ನಡೆದ ಶೈಕ್ಷಣಿಕ ಹಬ್ಬದ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡಿದ್ದನ್ನು ಸ್ಮರಿಸುತ್ತಾ ಅವರಿಗೆ ನನ್ನ ಪರಿಚಯ ಇರುವುದಾಗಿ ಸಭೆಗೆ ತಿಳಿಸಿದರು. ಅಲ್ಲದೆ ನನ್ನ ಬಗ್ಗೆ ಕೆಲವು ಅಭಿಮಾನದ ಮಾತುಗಳನ್ನಾಡಿದರು. ನನಗೆ ಇದರಿಂದ ಮುಜುಗರವಾದರೂ ಅವರ ಬಗ್ಗೆ ಮನಸ್ಸಿನಲ್ಲಿ ಗೌರವ ಭಾವನೆ ಮೂಡಿಬಂದಿತ್ತು. ಏಕೆಂದರೆ ನನಗೆ ಆ ಬಗ್ಗೆ (ಹಾಸನದ ಕಾರ್ಯಕ್ರಮದ ಬಗ್ಗೆ) ನೆನಪಿರಲಿಲ್ಲ! ಇದಾದ ಮೇಲೆ ಮತ್ತೊಂದು ಕಾರ್ಯಕಾರಿ ಸಮಿತಿ ಸಭೆಯನ್ನು ತುಮಕೂರಿನಲ್ಲಿಯೇ ನಡೆಸಲಾಯಿತು. ಆಗ ಅವರ-ನನ್ನ ಎರಡನೇ ಭೇಟಿ. ಅವರ-ನನ್ನ ಮೂರನೇ ಭೇಟಿಗೆ ಕಾಲ ಕೂಡಿ ಬರಲೇ ಇಲ್ಲ! ಇದಕ್ಕೆ ವಿಧಿ ವಿಲಾಸ ಎನ್ನಬಹುದು. 

ಕೆ.ಜೆ.ವಿ.ಎಸ್ ಸಂಘಟನೆಯಲ್ಲಿ ಸಹ ಉಪಾಧ್ಯಕ್ಷರಾಗಿ ನಾವು ಇನ್ನು ಹಲವು ಬಾರಿ ಸಂಧಿಸಬಹುದು ಎಂಬ ನನ್ನ ನಿರೀಕ್ಷೆ ಹುಸಿಯಾಗಿದೆ. ಅವರು ಇಹಲೋಕ ತ್ಯಜಿಸಿದ ಸುದ್ಧಿ ತಿಳಿದು ಮನಸ್ಸಿಗೆ ಆಘಾತವಾಗಿದೆ. ಅವರ ಪತ್ನಿ ಮೊದಲೇ ಇಹಲೋಕ ತ್ಯಜಿಸಿದ್ದರೆಂದು ತಿಳಿಯಿತು. ಬಹುಶಃ ಅವರ ಕರೆಯಂತೆ ಇವರು ಇಷ್ಟು ಬೇಗನೆ ಆ ಲೋಕಕ್ಕೆ ತೆರಳಿರಬಹುದೇ? ಏಕೆಂದರೆ ಸಾಮಾನ್ಯವಾಗಿ ೬೫-೭೦ ಸಾಯುವ ವಯಸ್ಸಲ್ಲ. 

ಏನೇ ಆಗಲಿ ಚಿದಂಬರಯ್ಯನವರ ಅಗಲಿಕೆ ಅವರ ಕುಟುಂಬವರ್ಗದವರಿಗೆ ಮತ್ತು ಅವರ ಸ್ನೇಹವರ್ಗಕ್ಕಷ್ಟೇ ಅಲ್ಲದೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಗೆ ಸಹ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಮತ್ತು ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬವರ್ಗದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

 -ಈ.ನಂಜಪ್ಪ, ನಿವೃತ್ತ ಸಹ ನಿರ್ದೇಶಕರು(ಶಿಕ್ಷಣ ಇಲಾಖೆ) ಮತ್ತು ಉಪಾಧ್ಯಕ್ಷರು, ಕೆಜೆವಿಎಸ್ 

  
ಸ್ನೇಹ ಜೀವಿ
ಸ್ನೇಹಕ್ಕೆ ಮತ್ತೊಂದು ಹೆಸರು ಚಿದಂಬರಯ್ಯ. ಅವರು ಸದಾ ಸ್ನೇಹಜೀವಿಯಾಗಿದ್ದರು. ಅವರ ಮನೆಗೆ ಚಲನ ಚಿತ್ರ ನಟರಾದ ಅಂಬರೀಶ್, ಶ್ರೀನಾಥ್ ಖ್ಯಾತ ಗಾಯಕರಾದ ಸಿ.ಅಶ್ವಥ್ ಇಂಥವರೆಲ್ಲ ಭೇಟಿ ನೀಡಿದ್ದಾರೆ. ಇವರುಗಳ ಸ್ನೆಹವನ್ನು ಯಾವಾಗ ಹೇಗೆ ಗಳಿಸಿದರು ಎಂಬುದೇ ಅಚ್ಚರಿಯ ಸಂಗತಿ. ಅವರದು ಪರೋಪಕಾರಿ ಮನೋಭಾವ. ನಾನು ತುಮಕೂರು ವಿಜ್ಞಾನ ಕೇಂದ್ರದ ಕಾರ್ಯದರ್ಶಿಯಾಗಿದ್ದಾಗ ಅವರು ಅಧ್ಯಕ್ಷರಾಗಿದ್ದರು. ಆ ಅವಧಿಯಲ್ಲಿ ಕೇಂದ್ರಕ್ಕೆ ಕಟ್ಟಡವನ್ನು ಪಡೆಯಲು ಅವರ ನೆರವು ಅಪಾರವಾದದ್ದು. ಉದ್ಯಮಿಯಾಗಿದ್ದರೂ ಸಹ ವಿಜ್ಞಾನ, ತಂತ್ರಜ್ಞಾನ, ಪರಿಸರದ ಬಗ್ಗೆ ಅವರಿಗಿದ್ದ ಕಾಳಜಿ ಅಪಾರ. ಅವರು ಹೆಸರಘಟ್ಟದವರಾಗಿದ್ದರೂ ಸಹ ತುಮಕೂರು ನಗರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದು ಯಾವುದೇ ಜಾತಿ - ಮತ ಎನ್ನದೇ ಇಲ್ಲಿನ ಜನಮಾನಸದಲ್ಲಿ ಬೆರೆತು ಹೋಗಿದ್ದರು. 

-ತುಮಕೂರು ನಾಗಭೂಷಣ,
ಪ್ರಾಂಶುಪಾಲರು, ಸಿದ್ಧಗಂಗ ಪದವಿ ಕಾಲೇಜು



ಒಳ್ಳೆಯ ಒಡನಾಡಿ
ಚಿದಂಬರಯ್ಯ ಅವರು ನಮಗೆ ಒಳ್ಳೆಯ ಒಡನಾಡಿಯಾಗಿದ್ದರು. ಕುವೆಂಪು ವೇದಿಕೆಗೆ ಅವರು ಗೌರವಾಧ್ಯಕ್ಷರಾಗಿದ್ದರು, ನಾನು ಕಾರ್ಯಾಧ್ಯಕ್ಷನಾಗಿದ್ದೆ. ಒಟ್ಟಿಗೆ ಕೆಲಸ ಮಾಡಿಕೊಂಡು ಬಂದೆವು. ಕುವೆಂಪು ಸಾಹಿತ್ಯದ ಬಗ್ಗೆ, ಪ್ರಗತಿಪರ ಚಿಂತನೆ, ವೈಚಾರಿಕತೆ ಬಗ್ಗೆ ಅವರಿಗೆ ತುಂಬಾ ಆಸಕ್ತಿ ಇತ್ತು. ಈ ಬಗ್ಗೆ ಪುಸ್ತಕದ ಮನೆಯಲ್ಲಿ ನಾವು ಅನೇಕ ಬಾರಿ ಸಾಕಷ್ಟು ಸಮಯ ಚರ್ಚೆ ನಡೆಸುತ್ತಿದ್ದೆವು. ಇದು ಅನೇಕರಿಗೆ ತಿಳಿಯದು.

-ಪ್ರೊ. ಜಿ.ಎಂ.ಶ್ರೀನಿವಾಸಯ್ಯ,
 ನಿವೃತ್ತ ಪ್ರಾಂಶುಪಾಲರು

ಕೈ ಚೆಲ್ಲಿ ದಾನ-
ಮನಸ್ಸು ಬಿಚ್ಚಿ ಅನ್ನ ಹಾಕಿದವರು
ಚಿದಂಬರಯ್ಯ ಅವರು ಮದುವೆ ಆಗುವುದಕ್ಕೆ ಮುಂಚೆಯೇ ಹೆಸರಘಟ್ಟ ಸುತ್ತ ಮುತ್ತಲಿನ ಯುವಕರನ್ನು ಸಂಘಟಿಸಿ ಕಬ್ಬಡಿ ಟೀಂ ಮಾಡಿಕೊಂಡಿದ್ದರು. ಆ ಟೀಂ ತುಮಕೂರಿಗೆ ಬಂದಿದ್ದಾಗ ಅವರು ಅದರ ಮೇನೇಜರ್ ಆಗಿದ್ದರು. ಆ ತಂಡ ರಾಜ್ಯ ಮಟ್ಟದ ಟ್ರೋಪಿಯನ್ನು ತುಮಕೂರಿನಲ್ಲಿ ಗೆದ್ದಿತು. 
ಅವರ ಮನೆಯಲ್ಲಿ ಉಣ್ಣದವರೇ ಇಲ್ಲ. ಕೈ ಚೆಲ್ಲಿ ದಾನ, ಮನಸ್ಸು ಬಿಚ್ಚಿ ಅನ್ನ ಹಾಕಿದ ಕುಟುಂಬ ಅದು. ಅವರ ಗಂಡ ಹೆಂಡತಿ ಸಂಬಂಧ ಹೇಗಿತ್ತು ಎಂದರೆ ಯಾವುದಾದರೂ ಸಭೆಯನ್ನು ಅವರ ಮನೆಯಲ್ಲಿ ಕರೆದರೆ ಅಷ್ಟೂ ಜನರಿಗೆ ಅಡುಗೆ ಸಿದ್ದತೆಯನ್ನು ಚಂದ್ರಕ್ಕ ಮಾಡುತ್ತಿದ್ದರು. ಇದಕ್ಕೆ ಯಾವ ಸೂಚನೆಯೂ ಇರುತ್ತಿರಲಿಲ್ಲ. ಅಂಥ ಸಂಬಂಧ ಅವರಿಬ್ಬರದು. ಇದರ ಕೊರತೆಯನ್ನು ನಾವು ಈಗ ಕಾಣುತ್ತಿದ್ದೇವೆ. ಚಂದ್ರಕ್ಕ ಅವರ ಸಾವೇ ಚಿದಂಬರಯ್ಯ ಅವರಿಗೆ ದೊಡ್ಡ ಆಘಾತವಾಗಿತ್ತು.

-ಜಿ.ಎಸ್.ಸೋಮಶೇಖರ್(ಸೋಮಣ್ಣ)



 ಕೆಳಜಾತಿಗಳ ಪರವಾಗಿದ್ದವರು
ನನಗೆ ೧೯೮೩ರಲ್ಲಿ ರಾಮದಾಸ್ ಅವರ ಮೂಲಕ   ಚಿದಂಬರಯ್ಯ ಅವರ ಪರಿಚಯ ಆಯಿತು. ನಂತರ ೧೯೮೯ ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರ ಮನೆಗೆ ಹೋಗಿದ್ದೆ. ಕರೆದದು ಹಣಸಹಾಯ ಮಾಡಿದರು. ಅಲ್ಲಿಂದ ಪರಿಚಯವಾಗಿ ಇಲ್ಲಿಯತನಕ ಮುಂದುವರೆಯಿತು. ಅವರು ಒಳ್ಳೆಯ ಚಿಂತಕರು ಮತ್ತು ಸಂಭಾವಿತ ವ್ಯಕ್ತಿ. ಸ್ನೇಹ ಜೀವಿ. ಕೆಳಜಾತಿಯವರಿಗೆ ಆದ್ಯತೆ ನೀಡುತ್ತಿದ್ದರುಅವರೊಂದಿಗೆ ಸದಾ ಇರುತ್ತಿದ್ದರು. ಅವರ ತಂದೆ   ಬಿ.ಎಂ.ಅಂಜಿನಪ್ಪ ಸ್ವತಂತ್ರ ಹೋರಾಟಗಾರರಾಗಿದ್ದು ಅವರ ಪ್ರಭಾವ ಇವರ ಮೇಲಿತ್ತು. 

-ನರಸೀಯಪ್ಪ,
ನಗರಸಭಾ ಸದಸ್ಯರುತುಮಕೂರು





 ಸಾಹಸ ಪ್ರವೃತ್ತಿ - ಜೀವಂತ ಉತ್ಸಾಹ
ನಾವು ಹೊಗೇನಕಲ್ ಗೆ ಪ್ರವಾಸ ಹೋಗಿದ್ದೆವು. ನಾನು ಹೆದರಿ ತೆಪ್ಪದಲ್ಲಿ ಹೋಗಲು ಹಾಗೂ ನೀರು ಬೀಳುವ ಜಾಗಕ್ಕೆ ಹೋಗಲು ಹೆದರಿ ನಿಂತಿದ್ದೆ. ಆಗ ಚಿದಮಬರಯ್ಯ ಅವರು ಕೈ ಹಿಡಿದು ನೀರು ಬೀಳುವ ಜಾಗಕ್ಕೆ ನನ್ನನ್ನು ರಿಸ್ಕ ಪಾಯಿಂಟ್ ಗೆ ಕರೆದೊಯ್ದರು. ಪುಟ್ಟ ಮಕ್ಕಳು ಪ್ರವಾಸ ಹೋದಂತೆ ನಮಗೆ ಅನುಭವ ನೀಡಿತು. ಇದು ಅವರ ಸಾಹಸ ಪ್ರವೃತ್ತಿಯನ್ನು ತೋರಿಸುತ್ತದೆ. ಇನ್ನು ಕುವೆಂಪು ವಿಚಾರದ ಬಗ್ಗೆ ಚರ್ಚಿಸುವಾ ಎಂ.ಹೆಚ್.ಕೃಷ್ಣಯ್ಯ ಅವರು ಅನಿಕೇತನದ ಬಗ್ಗೆ ಮಾತನಾಡುತ್ತಾ ತೇಜಸ್ವಿ ಅದನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ ಎಂದು ಮಾತನಾಡುತ್ತಿದ್ದರು. ಆಗ ಚಿದಂಬರಯ್ಯ ಅವರು ನಾನು ಹೆಚ್ಚು ಓದಿಲ್ಲ,ಆದರೆ ಕುವೆಂಪು ಎಲ್ಲವನ್ನೂ ತೊರೆದು ಹೇಗೆ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿರುವುದನ್ನು ಪ್ರಸ್ತಾಪಿಸಿದರು. ಇದು ವಿಶ್ವ ವಿದ್ಯಾಲಯದಲ್ಲಿ ಭಾಷಾ ಅಧ್ಯಯನ ಮಾಡಿದವರಿಗಿಂತಲೂ ಹೆಚ್ಚಿನ ವಿವೇಕ ಅವರಿರುವುದನ್ನು ತೋರಿಸಿತ್ತು. ಅವರ ತಂದೆ ಸ್ವಾತಂತ್ರ ಹೋರಾಟಗಾರರಾಗಿ ಅಸ್ಪೃಷ್ಯರೊಂದಿಗೆ ಊಟ ಬಡಿಸದಿದ್ದರೆ ಊಟವನ್ನೇ ಮಾಡುತ್ತಿರಲಿಲ್ಲವಂತೆ. ಅದೇ ಗುಣ ಚಿದಂಬರಯ್ಯ ಅವರಲ್ಲಿಯೂ ಬೆಳೆದಿತ್ತು. ಅವರ ಮನೆಯಲ್ಲಿ ಯಾವುದೇ ರೀತಿಯ ಬೇದ ಭಾವಕ್ಕೆ ಎಡೆಯಿರಲಿಲ್ಲ.
-ಕೆ.ದೊರೆರಾಜ್,
ನಿವೃತ್ತ ಪ್ರಾಂಶುಪಾಲರು



No comments:

Post a Comment