Friday, June 1, 2012

ಶುಕ್ರ ಸಂಕ್ರಮ

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
ಶುಕ್ರ ಸಂಕ್ರಮ

            ಜೂನ್ 6, 1012ರ ಸೂರ್ಯೋದಯವನ್ನು ನೋಡುವ ಅಪೂರ್ವ ಅವಕಾಶವನ್ನು ಕಳೆದುಕೊಳ್ಳದಿರಿ!!! ನಿಮ್ಮ ಜೀವಮಾನದಲ್ಲೇ ದೊರೆಯಲಿರುವ ಒಂದು ಅಪೂರ್ವ ಸುವರ್ಣಾವಕಾಶ!!
(ಭಾರತದಲ್ಲಿ ಅವಧಿ ಸೂರ್ಯೋದಯದಿಂದ ಪ್ರಾರಂಭಿಸಿ ಬೆಳಿಗ್ಗೆ 10.20ರ ವರೆಗೆ)

ಶುಕ್ರ ಸಂಕ್ರಮ ಎಂದರೇನು?
ಜೂನ್ 6, 2012 ರಂದು ಶುಕ್ರಗ್ರಹವು ಸೂರ್ಯನ ಮುಂದೆ ಹಾದು ಹೋಗಲಿದೆ. ಇದುವೇ ಶುಕ್ರಸಂಕ್ರಮ. ಇದೊಂದು ಅಪರೂಪದ ಖಗೋಳ ವಿದ್ಯಮಾನ. ದೂರದರ್ಶಕದ ಶೋಧನೆಯ ನಂತರ ಇತಿಹಾಸದಲ್ಲಿ ಏಳು ಬಾರಿ ಮಾತ್ರ ಶುಕ್ರ ಸಂಕ್ರಮವು ವೀಕ್ಷಣೆಗೆ ಲಭ್ಯವಾಗಿದೆ. ಶತಮಾನಕ್ಕೂ ಮೀರಿದ ಅವಧಿಯಲ್ಲಿ ಜೋಡಿಯಾಗಿ (ಎಂಟುವರ್ಷಗಳ ಮಧ್ಯಂತರ ಅವಧಿಯಂತೆ) ಶುಕ್ರ ಸಂಕ್ರಮ ಸಂಭವಿಸುತ್ತದೆ. ಈ ಹಿಂದಿನ ಸಂಕ್ರಮಗಳು ಕ್ರಮವಾಗಿ 1631 ಮತ್ತು 1639, 1761 ಮತ್ತು 1769, 1874 ಮತ್ತು 1882 ಹಾಗೂ ಈಚೆಗೆ 2004 ರಲ್ಲಿ ಸಂಭವಿಸಿರುತ್ತವೆ. 2004ರ ಶುಕ್ರ ಸಂಕ್ರಮದ ಜೋಡಿ ಸಂಕ್ರಮವೇ ಈಗ ಬರಲಿರುವ ಜೂನ್ 6ರ ಶುಕ್ರ ಸಂಕ್ರಮ.
ಶುಕ್ರ ಸಂಕ್ರಮ ಏಕೆ ಒಂದು ಅಪೂರ್ವ ಖಗೋಳ ಘಟನೆ?
ಶುಕ್ರ ಸಂಕ್ರಮ ಸಂಭವಿಸುವಾಗ ಒಬ್ಬ ಶಾಲಾ ಬಾಲಕ ಕೂಡ ಸೂರ್ಯ ಮತ್ತು ಭೂಮಿಯ ನಡುವಿನ ದೂರವನ್ನು ಸುಲಭವಾಗಿ ಅಳೆಯಬಹುದು. ವಿಪರ್ಯಾಸವೆಂದರೆ ಐಸಾಕ್ ನ್ಯೂಟನ್ನನೂ ಸೇರಿದಂತೆ ಪ್ರಮುಖ ವಿಜ್ಞಾನಿಗಳು ಶುಕ್ರ ಸಂಕ್ರಮವನ್ನು ವೀಕ್ಷಿಸಲು ಜೀವಮಾನವಿಡೀ ಕುತೂಹಲಿಗಳಾಗಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಇಂಥ ಅಪೂರ್ವ ಅವಕಾಶ ನಮಗೆ ದೊರೆತಿದೆ!. ಇದು ನಮಗೂ ಕೊನೆಯ ಅವಕಾಶ. ಈ ಶತಮಾನದ ಕೊನೆಯ ಘಟನೆ. ಮುಂದಿನ ಶುಕ್ರ ಸಂಕ್ರಮವು 105 ವರ್ಷಗಳ ನಂತರ ಮುಂದಿನ ಶತಮಾನದಲ್ಲಷ್ಟೇ ನೋಡಲು ಸಾಧ್ಯ!
ನಾವು ಶುಕ್ರ ಸಂಕ್ರಮವನ್ನು ನೋಡಬಹುದೇ?
ಹೌದು, ನಾವು ನೀವು ಪ್ರತಿಯೊಬ್ಬರೂ, ಸುಲಭವಾಗಿ, ಸರಳ ತಯಾರಿಯೊಂದಿಗೆ ಶುಕ್ರ ಸಂಕ್ರಮವನ್ನು ವೀಕ್ಷಿಸಬಹುದು! ನೀವೂ ನೋಡಿರಿ, ಇತರರೂ ವೀಕ್ಷಿಸುವಂತೆ ಪ್ರೋತ್ಸಾಹಿಸಿ. ಸುರಕ್ಷಿತ ಶುಕ್ರ ಸಂಕ್ರಮ ವೀಕ್ಷಣೆ ಬಹಳ ಸರಳ ಹಾಗೂ ಆಸಕ್ತಿದಾಯಕ ಚಟುವಟಿಕೆಯಾಗಬಲ್ಲದು.  ವೀಕ್ಷಣೆ: ನಿಮ್ಮ ಮನೆಯ ಮಾಳಿಗೆಯ ಮೇಲೆಅ ಅಥವಾ ಬಯಲಿನಲ್ಲಿ.
ಜೂನ್ 6, 2012 ಕ್ಕೂ ಮುಂಚೆ ಸೂರ್ಯೋದಯವನ್ನು ವೀಕ್ಷಿಸಲು ಒಂದು ಪ್ರಶಸ್ತ ಸ್ಥಳವನ್ನು ಗುರ್ತಿಸಿಕೊಳ್ಳಿ. ಜೂನ್ 6 ರಂದು ಸೂರ್ಯೋದಯಕ್ಕೆ ಮುಂಚೆ ಆ ಸ್ಥಳವನ್ನು ತಲುಪಿ. ಸೂರ್ಯೋದಯದ ಸಂದರ್ಭವನ್ನು ನೋಡಲು ಮರೆಯದಿರಿ. ಸೂರ್ಯ ಉದಯಿಸಿದಂತೆ ಶುಕ್ರ ಗ್ರಹವು ಕೆಂಪು ದೈತ್ಯ ಸೂರ್ಯನ ಮೈಮೇಲೆ ಕಪ್ಪುಚುಕ್ಕೆಯಾಗಿ ತನ್ನ ಪಯಣ ಮುಂದುವರೆಸಿರುವುದನ್ನು ನೀವು ಕಾಣುವಿರಿ

ಶುಕ್ರ ಸಂಕ್ರಮವನ್ನು ವೀಕ್ಷಿಸಲು ಸುಲಭ ವಿಧಾನಗಳು:
ಸೌರ ಕನ್ನಡಕಗಳು: ವೈಜ್ಞಾನಿಕವಾಗಿ ತಯಾರಿಸಿ ದೃಡೀಕರಿಸಲ್ಪಟ್ಟ ಸೌರಕನ್ನಡಕಗಳ ಮೂಲಕ ಸುರಕ್ಷಿತವಾಗಿ ಶುಕ್ರಸಂಕ್ರಮವನ್ನು ವೀಕ್ಷಿಸಬಹುದು. ಇಂತಹ ಕನ್ನಡಕಗಳ ಮೂಲಕ ಶುಕ್ರಗ್ರಹವು ಸೂರ್ಯನನ್ನು ದಾಡುವ ದೃಶ್ಯವನ್ನು ಸ್ಪಷ್ಟವಾಗಿ ವೀಕ್ಷಿಸಬಹುದು.
ಸೂರ್ಯನ ಬಿಂಬ ಮೂಡಿಸುವುದು: ಸಾಮಾನ್ಯ ಕನ್ನಡಿಯನ್ನು ಬಳಸಿ ಸೂರ್ಯ ಬಿಂಬವನ್ನು ಕತ್ತಲ ಕೋಣೆಯಲ್ಲಿ ಮೂಡಿಸಿ ಸುರಕ್ಷಿತವಾಗಿ ಶುಕ್ರ ಸಂಕ್ರಮವನ್ನು ವೀಕ್ಷಿಸಬಹುದು. ಸೂರ್ಯನ ಬಿಂಬವನ್ನು ಕನಿಷ್ಟ 10-15 ಮೀಟರ್ ದೂರದಿಂದ ಕನ್ನಡಿಯ ಮೂಲಕ ಮೂಡಿಸಿದಾಗ ದೊಡ್ಡ ಮತ್ತು ಉತ್ತಮ ಸೂರ್ಯಬಿಂಬವನ್ನು ಪಡೆಯಬಹುದು. ಕೋಣೆಯಲ್ಲಿ ಮೂಡಿದ ಸೂರ್ಯ ಬಿಂಬವನ್ನು ನೀವು ಗಮನಿಸುತ್ತಿರುವಂತೆ ಸೂರ್ಯನ ಮೇಲೆ ಶುಕ್ರ ಗ್ರಹವು ಚಲಿಸುವುದನ್ನು ಗುರ್ತಿಸುವಿರಿ. ಈ ಪ್ರಯೋಗದಿಂದ ನಿಮ್ಮ ಮನೆ ಮಂದಿಯಷ್ಟೇ ಅಲ್ಲ, ನೆರೆಹೊರೆಯವರೂ ಸಹ ಶುಕ್ರ ಸಂಕ್ರಮವನ್ನು ಸುರಕ್ಷಿತವಾಗಿ ವೀಕ್ಷಿಸಿ ಆನಂದಿಸಬಹುದು.
ಶುಕ್ರ ಸಂಕ್ರಮದ ಗುಂಪುವೀಕ್ಷಣೆಯನ್ನು ಸಂಘಟಿಸಿರಿ, ವೈಜ್ಞಾನಿಕ ಮನೋಭಾವದ ವಿಸ್ತರಣೆಗೆ ಬೆಂಬಲ ನೀಡಿರಿ.
ನಿಮ್ಮ ಶಾಲಾ ಕಾಲೇಜು, ಬಡಾವಣೆಗಳಲ್ಲಿ, ಕಛೇರಿಗಳಲ್ಲಿ ಸಂಕ್ರಮ ಕಾಲದಲ್ಲಿ ಉಪಹಾರದ ಗೋಷ್ಠಿಗಳನ್ನು ಏರ್ಪಡಿಸಿರಿ.

ಎಚ್ಚರಿಕೆ: ಸೂರ್ಯೋದಯದ ಪ್ರಾರಂಭಿಕ ಕ್ಷಣಗಳನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಪ್ರಖರ ಸೂರ್ಯನ ಕಡೆಗೆ ನೇರವಾಗಿ ನೋಡದಿರಿ.

ಪ್ರೊ. ಎಸ್.ಎಂ.ಶಶಿಧರ್
ಸಹಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ ಸಮಿತಿ
ಪ್ರಾಧ್ಯಾಪಕರು, ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಹೊಸಪೇಟೆ.
ದೂರವಾಣಿ:  99862 14375
ವೆಬ್ ತಾಣ: www.kjvs.org

No comments:

Post a Comment