Wednesday, June 6, 2012

“ಬೆಳ್ಳಿ ತಟ್ಟೆಯಲ್ಲಿ ಬಟಾಣಿ ಕಾಳು...!”

ಶುಕ್ರ ಸಂಕ್ರಮಣ ವೀಕ್ಷಿಸಿದ ಹೊಸಪೇಟೆ ನಾಗರಿಕರು,
“ಬೆಳ್ಳಿ ತಟ್ಟೆಯಲ್ಲಿ ಬಟಾಣಿ ಕಾಳು...!”
ಹೊಸಪೇಟೆ  ಜೂನ್ ೬:
ಯಾವತ್ತಿಗೂ ಬೆಳ್ಳಿ ಚುಕ್ಕೆಯಾಗಿ ಮಿಂಚುವ ಶುಕ್ರ ಇಂದು ಕಪ್ಪುಚುಕ್ಕೆಯಾದನು. ಪ್ರಖರ ಸೂರ್ಯನ ಬೆಳ್ಳಿ ತಟ್ಟೆಯಲ್ಲಿ ಶುಕ್ರನು ಬಟಾಣಿ ಕಾಳಿನಂತೆ ಮಂದಗತಿಯಲ್ಲಿ ಚಲಿಸಿದನು.
ಇದು ಶುಕ್ರ ಸಂಕ್ರಮಣ. ಇದೊಂದು ಅಪೂರ್ವ ಸಂದರ್ಭ. ಈ ಶುಕ್ರ ಸಂಕ್ರಮಣ ಮತ್ತೆ ಸಂಭವಿಸುವುದು ೨೧೧೭ರಲ್ಲಿ. ಮುಂದಿನ ನಾಲ್ಕನೇ ತಲೆಮಾರು ಅದಕ್ಕೆ ಸಾಕ್ಷಿಯದೀತು.
ಹೊಸಪೇಟೆಯ ವಿಜ್ಞಾನ ಹಾಗೂ ಖಗೋಳ ಆಸಕ್ತರಿಗೆ ಹಬ್ಬದ ವಾತಾವರಣ. ಮುಂಜಾವದಲ್ಲಿಯೇ ಲಗುಬಗೆಯಿಂದ ಸಂಕ್ರಮ ವೀಕ್ಷಿಸಲು ಅಲ್ಲಲ್ಲಿ ನೆರೆದರು. ಆದರೆ ಮೋಡಗಳು ಸೂರ್ಯನಿಗೆ ಅಡ್ಡಲಾಗಿ ಕೋಟೆಯನ್ನೇ ಕಟ್ಟಿಬಿಟ್ಟಿದ್ದವು. ಸುಮಾರು ಒಂದು ತಾಸು ಕಾದರೂ ಕದಲದ ಮೋಡಗಳು. ಖಗೋಳಾಸಕ್ತರ ಪ್ರಾರ್ಥನೆಗೆ ಒಗೊಟ್ಟವೋ ಎಂಬಂತೆ  ಕ್ರಮೇಣ ಸೋತು ಸರಿದು ಹೋದವು. ಬಾನಲ್ಲಿ ಸೂರ್ಯ ಮತ್ತು ಶುಕ್ರರ ಅಪೂರ್ವ ಸಂಗಮವನ್ನು ಸಂಕ್ರಮವನ್ನು ನೋಡಿ ಜನರು ಕಣ್ತುಂಬಿ ಕೊಂಡರು. ಸಂಭ್ರಮ ಪಟ್ಟರು.
ಹೊಸಪೇಟೆಯ ಸರ್ಕಾರೀ ಪದವಿ ಪೂರ್ವ ಕಾಲೇಜು ಮೈದಾನ ಹಾಗು ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ .ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ವ್ಯವಸ್ಥೆ ಮಾಡಿತ್ತು. ಸುರಕ್ಷಿತ ಸೌರ ಶೋಧಕಗಳನ್ನು ಸಾರ್ವಜನಿಕರ ವೀಕ್ಷಣೆಗೆ ಪೂರೈಸಿತು. ಎಲ್ಲರಿಗೂ ಕೈಗೆಟುಕುವ ೧೦ ರೂಪಾಯಿ ಬೆಲೆಯ ಈ ಕನ್ನಡಕಗಳನ್ನು ಶಾಲಾ ಮಕ್ಕಳು ಖರೀದಿಸಿಕೊಂಡು ಹೋದರು. ಅಪ್ಪ ಅಮ್ಮಂದಿರು ಮಕ್ಕಳನ್ನು ಶಿಬಿರಕ್ಕೆ ಕರೆತಂದು ಈ ವಿಷಯ ಇವರಿಗೆ ತಿಳಿಸಿರಿ ಎಂದು ವಿನಂತಿಸಿಕೊಂಡರು. ತಿಳಿಸಲೆಂದೇ ಕಾತರರಾಗಿ ಕುಳಿತ ಕೆ.ಜೆ.ವಿ.ಎಸ್.ಕಾರ್ಯಕರ್ತರು ಸಾಮಾನ್ಯ ಜನರಲ್ಲೂ ಇರುವ ವಿಜ್ಞಾನದ ಆಸಕ್ತಿ ಕಂಡು ನಿಬ್ಬೆರಗಾದರು. ಪುಳಕಿತಗೊಂಡರು.

ಚೆನ್ನಮ್ಮ ಎಂಬ ಗೃಹಿಣಿ ತನ್ನ ಇಬ್ಬರು ಮಕ್ಕಳೊಡನೆ ವೀಕ್ಷಣಾ ಶಿಬಿರಕ್ಕೆ ಬಂದರು. ಶಾಲೆಗೆ ಹೋಗುವ ಮುನ್ನ ತನ್ನ ಮಕ್ಕಳು ಈ ಸಂಕ್ರಮವನ್ನು ನೋಡಿಯೇ ಹೋಗಲಿ ಎಂಬುದು ಅವರ ಅಭಿಲಾಷೆ. ಪತ್ರಿಕೆ ಟೀವಿಗಳಲ್ಲಿ ಬಂದ ವರದಿಗಳಿಂದ ಆವರಲ್ಲಿ ಕುತೂಹಲ ಉಂಟಾಗಿತ್ತು. “ನಮ್ಮ ಜೀವನದಲ್ಲಿ ಇನ್ನೆಂದೂ ನೋಡಲಾಗದ ಈ ದೃಶ್ಯವನ್ನು ನಾವು ಮಿಸ್ ಮಾಡಿಕೊಳ್ಳಬಾರದೆಂದು ಬಂದೆವು” ಎಂದು ಹೇಳಿದಾಗ ಸಾರ್ಥಕ ನಗೆಯೊಂದು ಮಿಂಚಿತು.
 “ಶಾಲೆಯಲ್ಲಿ ಶಿಕ್ಷಕರು ಈ ಸಂಕ್ರಮದ ವೀಕ್ಷಣೆಗೆ ವ್ಯವಸ್ಥೆ ಮಾಡಬೇಕಿತ್ತು. ಮಾಡಿದಂತೆ ಕಾಣುತ್ತಿಲ್ಲ. ಅದಕ್ಕಾಗಿ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದೆವು” ಎಂದವರು ಕಿರಾಣಿ ವ್ಯಾಪಾರಿ ಪಂಪಾಪತಿ. “ಥ್ಯಾಂಕ್ಸ್ ಗಾಡ್, ಹೊಸಪೇಟೆಯಲ್ಲಿ  ನಿಮ್ಮಂಥವರೂ ಇದ್ದೀರಿ. ಈ ಘಟನೆಯನ್ನ ಹೇಗೆ ನೋಡುವುದು ಎಂದು ಚಿಂತಿತನಾಗಿದ್ದೆ. ಅಂತೂ ನಾವು ಮಿಸ್ ಮಾಡಿಕೊಳ್ಳಲಿಲ್ಲ’ ಅಂದವರು ಡಾ.ರವೀಂದ್ರ. ಖಗೊಳಕ್ಕೊಂದು ಕಿಟಕಿಯಾಗುವ ಸ್ಟೆಲ್ಲೇರಿಯಂ ತಂತ್ರಾಂಶವನ್ನೂ ಪಡೆದುಕೊಂಡು ಹೋದರು.
ವಿನುತ ಎಂಬ ವಿದ್ಯಾರ್ಥಿನಿ ಬೆಳಗಿನ ಶಾಲೆಗ ಚಕ್ಕರ್ ಹಾಕಿ ಸಂಕ್ರಮ ವೀಕ್ಷಿಸಿದಳು. ಸ್ಕೂಲ್ ಮಿಸ್ ಆಗಿದ್ದಕ್ಕೆ ಬೇಜಾರಿಲ್ವಾ ಎಂದು ಆಕೆಯ ತಾಯಿಯನ್ನು ಕೇಳಿದ್ದಕ್ಕೆ “ಇಂಥ ದೊಡ್ಡ ಘಟನೆಯನ್ನ ನೋಡಿದ್ದು ಮರೆಯಲಾಗದ ಅನುಭವ. ಈ ಮೈದಾನದಲ್ಲಿ  ಆಕಾಶ ಸೂರ್ಯ ಶುಕ್ರ ಇವರ ನಡುವೆ ಇವಳು  ಹೊಸತೇನನ್ನೋ ಕಲಿಯುತ್ತಾಳೆ. ಈ ಅನುಭವವೂ ಶೈಕ್ಷಣಿಕ ಮಹತ್ವದ್ದೇ ಅಲ್ವ” ಅಂದವರು ಕುಸುಮ ಮೇಡಂ, ಕಾಲೇಜಿನ ಅಧ್ಯಾಪಕಿ.
ವೀಕ್ಷಣ ಶಿಬಿರವನ್ನು ಆಯೋಜಿಸಿದ್ದವರಿಗೆ ಇದು ಕೇವಲ ಅಪರೂಪದ ದೃಶ್ಯ ಎಂಬುದಷ್ಟೇ ಮುಖ್ಯವಾಗಿರಲಿಲ್ಲ, ಈ ವಿದ್ಯಮಾನವು ವಿಶ್ವ ಹಾಗೂ ಈ ವಿಶ್ವದಲ್ಲಿ ನಮ್ಮ ಸ್ಥಾನ ಕುರಿತು ಚಿಂತನೆ ಹಾಗೂ ಶೋಧನೆಗಳಿಗೆ ಇಂಬು  ಕೊಡುತ್ತದೆ ಎಂಬುದಾಗಿತ್ತು. “ಖಗೋಳದ ವಿಸ್ಮಯಗಳನ್ನು ನಾವಿನ್ನೂ ಪೂರ್ಣ ಅರ್ಥ ಮಾಡಿಕೊಳ್ಳಲಾಗಿಲ್ಲವಾದರೂ ವಿಜ್ಞಾನದ ಮೂಲಕ ಅರಿಯಬಲ್ಲೆವು; ಹಾಗೂ ವಿಜ್ಞಾನ ಮಾತ್ರವೇ ವಿಶ್ವವನ್ನು ಅರಿಯುವ ಮಾರ್ಗ; ಈ ಘಟನೆಯ ನೆಪದಲ್ಲಿ ಜನರಲ್ಲಿರುವ ಮೂಢ ನಂಬಿಕೆಗಳು  ಕರಗಲಿ, ವೈಜ್ಞಾನಿಕ ಮನೋಭಾವ ಮೂಡಲಿ” ಎಂಬುದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಹ ಕಾರ್ಯದರ್ಶಿ ಎಸ್,ಎಂ.ಶಶಿಧರ ಅವರ ಆಶಯವಾಗಿತ್ತು.

ಹೊಸಪೇಟೆಯ ನಗರಸಭೆಯ ಕಮಿಷನರ್ ಅವರು ಕೆ.ಜೆ.ವಿಎಸ್. ವೀಕ್ಷಣ ಶಿಬಿರದಲ್ಲಿ ಶುಕ್ರ ಸಂಕ್ರಮ ವೀಕ್ಷಿಸಿದರು
 .



No comments:

Post a Comment