Thursday, June 7, 2012

KJVSನಿಂದ ಖಗೋಳ ಉತ್ಸವ -ಪ್ರಜಾವಾಣಿ ವರದಿ

ಶತಮಾನದ ಅಪರೂಪದ ಘಟನೆ :ಮೋಡಗಳ ಮಧ್ಯೆ ಇಣುಕಿದ ರವಿಗೆ `ಶುಕ್ರ'ದೆಸೆ

  • June 07, 2012


ಬೆಂಗಳೂರು: ಬೆಳ್ಳಂಬೆಳಗ್ಗೆಯೇ ಆಕಾಶದ ಕಡೆಗೆ ದೃಷ್ಟಿ ನೆಟ್ಟಿದ್ದ ಕಣ್ಣುಗಳು.. ಮೋಡಗಳ ನಡುವೆಯೂ ಇಣುಕುತ್ತಿದ್ದ ಸೂರ್ಯನನ್ನು ನೋಡಲು ಸಾಲು, ಸಾಲು.. ಚಲಿಸುವ ಮೋಡಗಳ ನಡುವೆಯೂ ಶುಕ್ರ ಸಂಕ್ರಮವನ್ನು ಕಣ್ತುಂಬಿಕೊಂಡು ಶತಮಾನದ ಅಪರೂಪದ ಘಟನೆಗೆ ಸಾಕ್ಷಿಯಾದ ಸಾವಿರಾರು ಜನ..

ಬುಧವಾರ ಆಕಾಶದಲ್ಲಿ ಸಂಭವಿಸಿದ ಶುಕ್ರ ಸಂಕ್ರಮವನ್ನು ನಗರದ ಜನತೆ ಕುತೂಹಲದಿಂದ ವೀಕ್ಷಿಸಿದರು. ಬೆಳಿಗ್ಗೆ ಆರು ಗಂಟೆಯಿಂದಲೇ ನಗರದ ವಿವಿಧ ಮೈದಾನಗಳಲ್ಲಿ ಸೇರಿದ್ದ ಜನರು ವಿಶೇಷ ಕನ್ನಡಕ (ಸನ್ ಫಿಲ್ಟರ್) ಹಾಗೂ ದೂರದರ್ಶಕಗಳ ಮೂಲಕ ಶುಕ್ರ ಸಂಕ್ರಮವನ್ನು ವೀಕ್ಷಿಸಿದರು. ಬೆಳಿಗ್ಗೆ ಆರರಿಂದ ಹತ್ತು ಗಂಟೆಯವರೆಗೆ ಆಕಾಶಕ್ಕೆ ನೆಟ್ಟ ದೃಷ್ಟಿ ತೆಗೆಯದೇ ಜನರು ಶುಕ್ರ ಸಂಕ್ರಮವನ್ನು ಮನದಣಿಯೆ ನೋಡಿದರು.

ತಾರಾಲಯದಲ್ಲಿ ಜನರ ದಂಡು: ಶುಕ್ರ ಸಂಕ್ರಮದ ವೀಕ್ಷಣೆಗೆ ಚೌಡಯ್ಯ ರಸ್ತೆಯ ಜವಾಹರ್‌ಲಾಲ್ ನೆಹರೂ ತಾರಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಹಲವು ಬಗೆಯ ದೂರದರ್ಶಕಗಳ ಮೂಲಕ ಶುಕ್ರ ಸಂಕ್ರಮದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ವಿಶೇಷ ಕನ್ನಡಕ (ಸನ್ ಫಿಲ್ಟರ್) ಮೂಲಕ ಜನರು ಸೂರ್ಯನನ್ನು ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳಿಗ್ಗೆ ಆರು ಗಂಟೆಗೇ ತಾರಾಲಯದ ಆವರಣದಲ್ಲಿ ಸೇರಿದ್ದ ಜನರು ಆಸಕ್ತಿಯಿಂದ ಶುಕ್ರ ಸಂಕ್ರಮವನ್ನು ವೀಕ್ಷಿಸಿದರು.

`ಬೆಳಗ್ಗೆಯಿಂದಲೇ ಜನರ ದಂಡು ತಾರಾಲಯದತ್ತ ಹರಿದು ಬಂತು. ಮೋಡಗಳಿದ್ದರೂ ಜನರ ಕುತೂಹಲ ಕಡಿಮೆಯಾಗಿರಲಿಲ್ಲ. ಸುಮಾರು ಒಂದು ಸಾವಿರ ಜನರು ಬುಧವಾರ ಸಂಭವಿಸಿದ ಶುಕ್ರ ಸಂಕ್ರಮವನ್ನು ತಾರಾಲಯದ ಆವರಣದಲ್ಲಿ ವೀಕ್ಷಿಸಿದರು. ಮೋಡಗಳ ಕಾರಣದಿಂದ ಘಟನೆಯನ್ನು ಸಂಪೂರ್ಣವಾಗಿ ನೋಡಲಾಗದಿದ್ದರೂ, ಗೋಚರಿಸಿದಷ್ಟು ಶುಕ್ರ ಸಂಕ್ರಮವನ್ನು ಜನರು ಕಣ್ತುಂಬಿಕೊಂಡು ಕುತೂಹಲ ತಣಿಸಿಕೊಂಡರು` ಎಂದು ತಾರಾಲಯದ ನಿರ್ದೇಶಕಿ ಡಾ.ಬಿ.ಎಸ್.ಶೈಲಜಾ ಹೇಳಿದರು.

`ಈ ಹಿಂದೆ 2004 ರಲ್ಲಿ ಶುಕ್ರ ಸಂಕ್ರಮ ನಡೆದಿದ್ದಾಗ ಘಟನೆಯನ್ನು ಪೂರ್ಣವಾಗಿ ಸಾರ್ವಜನಿಕರು ವೀಕ್ಷಿಸಿದ್ದರು. ಈ ಬಾರಿ ಮೋಡಗಳ ಕಾರಣದಿಂದ ಪೂರ್ಣವಾಗಿ ಶುಕ್ರ ಸಂಕ್ರಮವನ್ನು ನೋಡಲು ಸಾಧ್ಯವಾಗಲಿಲ್ಲ. ಇನ್ನು ಮುಂದಿನ ಶುಕ್ರ ಸಂಕ್ರಮ ನಡೆಯುವುದು 2117 ಕ್ಕೆ. ಆ ವೇಳೆಗೆ ನಾವ್ಯಾರೂ ಬದುಕುಳಿದಿರುವುದಿಲ್ಲ. ಈ ಶತಮಾನದ ಕೊನೆಯ ಶುಕ್ರ ಸಂಕ್ರಮದ ಪೂರ್ಣ ವೀಕ್ಷಣೆ ಸಾಧ್ಯವಾಗದೇ ಇದ್ದುದು ಜನರಲ್ಲಿ ಸ್ವಲ್ಪ ಮಟ್ಟಿಗೆ ಬೇಸರ ತರಿಸಿದೆ` ಎಂದು ಅವರು ತಿಳಿಸಿದರು.

ಲಾಲ್‌ಬಾಗ್‌ನಲ್ಲಿ ಆಕಾಶಕ್ಕೆ ಲಗ್ಗೆ : ಶುಕ್ರ ಸಂಕ್ರಮದ ವೀಕ್ಷಣೆಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಬೆಂಗಳೂರು ಅಸ್ಟ್ರನಾಮಿಕಲ್ ಸೊಸೈಟಿ ವತಿಯಿಂದ ಲಾಲ್‌ಬಾಗ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಶುಕ್ರ ಸಂಕ್ರಮದ ವೀಕ್ಷಣೆಗಾಗಿ ಜನರು ಬೆಳಗ್ಗೆ ಆರು ಗಂಟೆಗೇ ಲಾಲ್‌ಬಾಗ್‌ನಲ್ಲಿ ಸೇರಿದ್ದರು. ಶುಕ್ರ ಸಂಕ್ರಮದ ವೀಕ್ಷಣೆಗಾಗಿ ಲಾಲ್‌ಬಾಗ್‌ನ ಗೋಪುರದ ಬಳಿ ಆರು ದೂರದರ್ಶಕ ಅಳವಡಿಸಲಾಗಿತ್ತು. ಜನರು ಸರತಿ ಸಾಲಿನಲ್ಲಿ ನಿಂತು ಒಬ್ಬೊಬ್ಬರಾಗಿ ದೂರದರ್ಶಕಗಳ ಮೂಲಕ ಶುಕ್ರ ಸಂಕ್ರಮವನ್ನು ವೀಕ್ಷಿಸಿದರು.

ಜೊತೆಗೆ ನೇರವಾಗಿ ವಿಶೇಷ ಕನ್ನಡಕಗಳ ಮೂಲಕವೂ ಜನರು ಶುಕ್ರ ಸಂಕ್ರಮವನ್ನು ವೀಕ್ಷಿಸಿದರು. ಖಗೋಳ ಘಟನೆಗಳ ಬಗ್ಗೆ ಜನರಲ್ಲಿನ ಮೌಢ್ಯವನ್ನು ಹೋಗಲಾಡಿಸಲು ಘಟನೆಯ ಸಮಯದಲ್ಲಿ ಉಪಾಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ವೀಕ್ಷಣೆಗಾಗಿ ಬಂದಿದ್ದ ಸುಮಾರು ಐನೂರು ಜನರಿಗೆ ಉಪ್ಪಿಟ್ಟು ಹಾಗೂ ಕೇಸರಿಬಾತ್ ವಿತರಿಸಲಾಯಿತು. ವಿಜ್ಞಾನ ಸಂವಹನಕಾರ ಪ್ರೊ.ಎಂ.ಆರ್.ನಾಗರಾಜು ಸ್ಥಳದಲ್ಲೇ ಇದ್ದು, ಶುಕ್ರ ಸಂಕ್ರಮ ವೀಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಶುಕ್ರ ಸಂಕ್ರಮದ ಛಾಯಾಚಿತ್ರಗಳನ್ನು ತೆಗೆಯುವವರಿಗೂ ವಿಶೇಷ ಅನುಕೂಲ ಕಲ್ಪಿಸಲಾಗಿತ್ತು.

                 ಸಂಕ್ರಮಕ್ಕೆ ಅಡ್ಡಿಯಾದ ಚಲಿಸುವ ಮೋಡಗಳು...
ಶುಕ್ರ ಸಂಕ್ರಮದ ವೀಕ್ಷಣೆಯಲ್ಲಿ ತೊಡಗಿದ್ದ ನೋಡುಗರ ಕುತೂಹಲಕ್ಕೆ ತಣ್ಣೀರೆರೆಚುವ ಪ್ರಯತ್ನದಲ್ಲಿ ಬುಧವಾರ ಮೋಡಗಳು ತೊಡಗಿದ್ದವು. ಬೆಳಿಗ್ಗೆಯಿಂದಲೇ ದಟ್ಟ ಮೋಡಗಳು ಆಕಾಶದಲ್ಲಿ ಹರಿದಾಡುತ್ತಿದ್ದವು.

ಬೆಳಿಗ್ಗೆ ಏಳು ಗಂಟೆಯ ವೇಳೆಗೆ ಮೋಡಗಳ ಚಲನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಎಂಟು ಗಂಟೆಯ ಹೊತ್ತಿಗೆ ಪುನಃ ದಟ್ಟ ಮೋಡಗಳು ಸೂರ್ಯನಿಗೆ ಅಡ್ಡಗಟ್ಟಿ ನಿಂತವು. ಒಂಬತ್ತು ಗಂಟೆಯ ನಂತರ ಚದುರಿದಂತೆ ಮೋಡಗಳ ಚಲನೆ ಇದ್ದುದರಿಂದ ಅಂತಿಮ ಕ್ಷಣಗಳ ಶುಕ್ರ ಸಂಕ್ರಮದ ವೀಕ್ಷಣೆ ಸ್ವಲ್ಪ ಮಟ್ಟಿಗೆ ಸಾಧ್ಯವಾಯಿತು.

`ಮೋಡಗಳ ಹಾವಳಿ ಇದ್ದರೂ, ಶುಕ್ರ ಸಂಕ್ರಮದ ವೀಕ್ಷಣೆಗೆ ಹೆಚ್ಚೇನೂ ತೊಂದರೆಯಾಗಲಿಲ್ಲ. ಮೋಡಗಳು ಹರಿದಾಡುತ್ತಿರುವಂತೇ ಈ ವಿಶೇಷ ಘಟನೆಯನ್ನು ವೀಕ್ಷಿಸಿದ್ದು ಒಂದು ವಿಶಿಷ್ಟ ಅನುಭವ. ಮೋಡಗಳ ಕಾರಣದಿಂದ ಸಾರ್ವಜನಿಕರಿಗೆ ಶುಕ್ರ ಸಂಕ್ರಮದ ವೀಕ್ಷಣೆಯಲ್ಲಿ ಹೆಚ್ಚಿನ ನಿರಾಸೆ ಏನೂ ಆಗಲಿಲ್ಲ` ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಈ.ಬಸವರಾಜು ತಿಳಿಸಿದರು.


 
ಬುಧವಾರ ಸಂಭವಿಸಿದ ಶುಕ್ರ ಸಂಕ್ರಮದ ದೃಶ್ಯ ನಗರದ ಜವಾಹರ್‌ಲಾಲ್ ನೆಹರೂ ತಾರಾಲಯದ ದೂರದರ್ಶಕದಲ್ಲಿ ಕಂಡು ಬಂದದ್ದು ಹೀಗೆ

ಹಲವೆಡೆ ವಿಶೇಷ ಅವಕಾಶ : ಶುಕ್ರ ಸಂಕ್ರಮದ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಕೂಲವಾಗಲು ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ ವತಿಯಿಂದ ನಗರದ ಹಲವೆಡೆ ಅವಕಾಶ ಮಾಡಲಾಗಿತ್ತು. ನ್ಯಾಷನಲ್ ಕಾಲೇಜು ಮೈದಾನ, ಸ್ಯಾಂಕಿ ಕೆರೆ ಉದ್ಯಾನವನ, ಮತ್ತಿಕೆರೆಯ ಜೆ.ಪಿ. ಉದ್ಯಾನ, ಆರ್.ಟಿ.ನಗರದ ಎಚ್.ಎಂ.ಟಿ ಮೈದಾನ, ನಂದಿನಿ ಲೇಔಟ್ ಉದ್ಯಾನವನ, ರಾಜಾಜಿನಗರದ ಆರ್.ಪಿ.ಏ ಮೈದಾನ, ಕೆಂಗೇರಿ ಉಪನಗರ ಗ್ರಂಥಾಲಯದ ಎದುರು ಮತ್ತಿತರ ಕಡೆಗಳಲ್ಲಿ ಶುಕ್ರ ಸಂಕ್ರಮಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಕಡೆಗಳಲ್ಲೂ ಘಟನೆಯ ವೀಕ್ಷಣೆಗಾಗಿ ದೂರದರ್ಶಕಗಳ ವ್ಯವಸ್ಥೆ ಮಾಡಲಾಗಿತ್ತು.

`ಸಂಸ್ಥೆಯ ವತಿಯಿಂದ ನಗರದ 17 ಕಡೆಗಳಲ್ಲಿ ಶುಕ್ರ ಸಂಕ್ರಮದ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ಸುಮಾರು ನಾಲ್ಕು ಸಾವಿರ ಜನರು ಶುಕ್ರ ಸಂಕ್ರಮವನ್ನು ವೀಕ್ಷಿಸಿದ್ದಾರೆ. ಬಸವೇಶ್ವರ ನಗರದ ಬಸವೇಶ್ವರ ಪಬ್ಲಿಕ್ ಶಾಲೆ, ರಾಜಾಜಿನಗರದ ಪೇರೆಂಟ್ಸ್ ಅಸೋಸಿಯೇಷನ್ ಶಾಲೆ ಹಾಗೂ ಪೀಣ್ಯದ ಐಟಿಐ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಶುಕ್ರ ಸಂಕ್ರಮದ ವೀಕ್ಷಣೆಯ ವ್ಯವಸ್ಥೆ ಮಾಡಲಾಗಿತ್ತು. ಶುಕ್ರ ಸಂಕ್ರಮದ ವೀಕ್ಷಣೆಗೆ ಮಾಡಿದ್ದ ವಿಶೇಷ ವ್ಯವಸ್ಥೆಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ` ಎಂದು ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿಯ ರಾಜ್ಯ ಸಂಚಾಲಕ ಜಿ.ಸತೀಶ್ ಕುಮಾರ್ ಹೇಳಿದರು.

`ಇದೇ ಮೊದಲ ಬಾರಿಗೆ ಶುಕ್ರ ಸಂಕ್ರಮ ನೋಡಿ ಪುಳಕಗೊಂಡೆ. ಸೂರ್ಯನ ಮುಂದೆ ಕಪ್ಪು ಚುಕ್ಕೆಯೊಂದು ಹಾದು ಹೋದಂತೆ ಕಾಣುವ ಘಟನೆಯನ್ನು ನೋಡಿದ್ದು ವಿಶೇಷ ಅನುಭವ. ಮೋಡಗಳಿದ್ದರೂ ವೀಕ್ಷಣೆಗೆ ಹೆಚ್ಚಿನ ಅಡ್ಡಿಯೇನೂ ಆಗಲಿಲ್ಲ. ಮೋಡದ ಮರೆಯಲ್ಲೂ ಸೂರ್ಯನ ಮೇಲಿಂದ ಹಾದುಹೋದ ಚುಕ್ಕೆಯಾಕಾರದ ಶುಕ್ರನನ್ನು ಕಣ್ತುಂಬಿಕೊಂಡೆ` ಎಂದಿದ್ದು ರಾಜಾಜಿನಗರದ  ಕರುಣಾಕರ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ನಗರದ ಹೊಸೂರು ರಸ್ತೆಯ ಸುಜನ ವಿದ್ಯಾಸಂಸ್ಥೆಯಲ್ಲಿ ಬುಧವಾರ ಶುಕ್ರ ಸಂಕ್ರಮದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಖಗೋಳ ಘಟನೆಗಳು ಮೌಢ್ಯಗಳಿಗೆ ಕಾರಣವಾಗದೇ ಉತ್ಸವಗಳಾಗಿ ಬದಲಾಗಬೇಕು ಎಂಬ ಉದ್ದೇಶದಿಂದ ಜಾಗೃತಿ ಶಿಬಿರ ಹಮ್ಮಿಕೊಳ್ಳ ಲಾಗಿತ್ತು. ಶಾಲೆಯ ನೂರಾರು ವಿದ್ಯಾರ್ಥಿಗಳು ಶುಕ್ರ ಸಂಕ್ರಮ ವನ್ನು ವೀಕ್ಷಿಸಿದರು. ಶಾಲೆಯ ಆಡಳಿತ ಮಂಡಳಿಯ ಆರ್. ಲೋಕೇಶ್, ಚನ್ನಕೇಶವ, ಎ.ಟಿ.ಅರಸು  ಉಪಸ್ಥಿತರಿದ್ದರು.

No comments:

Post a Comment