Thursday, June 7, 2012

ನಿರೀಕ್ಷೆ ಹುಸಿ ಮಾಡದ ಶುಕ್ರ ಸಂಕ್ರಮ -EB

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ

ನಿರೀಕ್ಷೆ ಹುಸಿ ಮಾಡದ ಶುಕ್ರ ಸಂಕ್ರಮ

ನಿನ್ನೆ ಪ್ರಾರಂಭವಾದ ಮುಂಗಾರು ಮಳೆ ಹಾಗೂ ರಾತ್ರಿ ಕವಿದ ಮೋಡಗಳು ಶುಕ್ರ ಸಂಕ್ರಮ ವೀಕ್ಷಣೆ ಸಾಧ್ಯವೋ, ಇಲ್ಲವೋ ಎಂಬ ಅನುಮಾನ ಹುಟ್ಟಿಸಿತ್ತು. ಆದರೆ ಬೆಳಿಗ್ಗೆ ಎಂಟು ಗಂಟೆಯ ನಂತರ ಚಲಿಸುವ ಮೋಡಗಳು ಒಮ್ಮೆ ಸೂರ್ಯನನ್ನು ಮುಚ್ಚಿದರೆ ಒಮ್ಮೆ ವೀಕ್ಷಕರಿಗೆ ನಿರಾಸೆಯಾಗದಂತೆ  ಮುಂದೆ ಚಲಿಸುವ ಮೂಲಕ ಶುಕ್ರನನ್ನು ನೋಡಲು ಅವಕಾಶ ಮಾಡಿಕೊಟ್ಟವು. ಚಲಿಸುವ ಮೋಡಗಳ ಅರ್ಥ ನಿಜವಾಗಿ ಇಲ್ಲಿ ಅನುಭವವಾಯಿತು ಎನ್ನಬಹುದು. ಹೀಗಾಗಿ ಶತಮಾನದ ಕಡೆಯ ಶುಕ್ರ ಸಂಕ್ರಮ ವನ್ನು ವೀಕ್ಷಿಸಿ ಜನರು ಪುಳಕಿತರಾದರು. ಸಂಘಟಕರ ಶ್ರಮವೂ ಸಾರ್ಥಕವಾಯಿತು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಬೆಂಗಳೂರು ಅಸ್ಟ್ರನಾಮಿಕಲ್ ಸೊಸೈಟಿ ಸಂಸ್ಥೆಗಳು ಕರಾವಿಪ ಬೆಂಗಳೂರು ಜಿಲ್ಲಾ ಸಮಿತಿ, ವಿಜ್ಞಾನ ಮತ್ತು ಅಭಿವೃದ್ದಿ ಕೇಂದ್ರ, ಅಪ್ನಾದೇಶ್ ಅಸೋಸಿಯೇಷನ್ ಸಂಸ್ಥೆಗಳೊಂದಿಗೆ ಜಂಟಿಯಾಗಿ ಬೆಂಗಳೂರಿನ ಲಾಲ್‌ಭಾಗ್ ಗೊಪುರದ ಬಂಡೆಯ ಮೇಲೆ ಏರ್ಪಡಿಸಿದ್ದ ವೀಕ್ಷಣಾ ಕಾಂiiಕ್ರಮಕ್ಕೆ ಸಂಘಟಕರಿಗಿಂತ ಮೊದಲೇ ಸಾರ್ವಜನಿಕರು ಆಗಮಿಸಿದ್ದು ಜನರಿಗಿರುವ ಕುತೂಹಲ ಹಾಗೂ ಆಸಕ್ತಿಯನ್ನು ಪ್ರದರ್ಶಿಸಿತು. ಆರು ವಿವಿಧ ರೀತಿಯ ದೂರದರ್ಶಕಗಳನ್ನು ವ್ಯವಸ್ಥೆಗೊಳಿಸಿ ಸುಂದರ ಶುಕ್ರ ಸಂಕ್ರಮವನ್ನು ನೋಡಲು ಅವಕಾಶ ಮಾಡಲಾಗಿತ್ತು. ಇದರ ಜೊತೆಗೆ ನೇರವಾಗಿ ವೀಕ್ಷಿಸಲು ಸೋಲಾರ್ ಕನ್ನಡಕಗಳು ಹಾಗೂ ಪುಸ್ತಕ ಮಾರಾಟವನ್ನು ಏರ್ಪಡಿಸಲಾಗಿತ್ತು. ಇಂಥ ಸಂದರ್ಭದಲ್ಲಿ ಇರುವ ಮೌಢ್ಯವನ್ನು ಹೋಗಲಾಡಿಲು ಉಪಹಾರ ಗೋಷ್ಠಿಯನ್ನು ಏರ್ಪಡಿಸಿ ಆಗಮಿಸಿದ್ದ ಎಲ್ಲರಿಗೂ ಉಪ್ಪಿಟ್ಟು, ಕೇಸರಿ ಬಾತ್ ಅನ್ನು ವಿತರಿಸಲಾಯ್ತು.

ವಿಜ್ಞಾನ ಸಂವಹನಕಾರ ಪ್ರೊ.ಎಂ.ಆರ್.ನಾಗರಾಜು ಅವರು ಶುಕ್ರ ಸಂಕ್ರಮ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು. ಶುಕ್ರ ಸಂಕ್ರಮ ಫೋಟೋ ತೆಗೆಯುವವರಿಗೂ ಅನುಕೂಲವನ್ನು ಮಾಡಿಕೊಡಲಾಗಿತ್ತು. ಇನ್ನೇನು ಮೋಡ ಕವಿಯಿತು, ನೋಡಲು ಸಾಧ್ಯವಿಲ್ಲ ಎಂದುಕೊಳ್ಳುತ್ತಿದ್ದಂತೆ ತಕ್ಷಣ ಸೂರ್ಯನು ಗೋಚರಿಸಿ ವೀಕ್ಷಣೆಗೆ ಸಾಧ್ಯವಾಗುತ್ತಿತ್ತು. ಹಾಗಾಗಿ ಮೂರು ಹಾಗೂ ನಾಲ್ಕನೇ ಸಂಪರ್ಕ(ಕಾಂಟ್ಯಾಕ್ಟ್ಸ್) ಕೂಡ ನೋಡಲು ಸಾಧ್ಯವಾಯಿತು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಈ.ಬಸವರಾಜು, ಉಪಾಧ್ಯಕ್ಷರಾದ ಈ.ನಂಜಪ್ಪ, ಬೆಂಗಳೂರು ಅಸ್ಟ್ರನಾಮಿಕಲ್ ಸೊಸೈಟಿಯ ನವೀನ್ ನಂಜುಂಡಪ್ಪ  ಹಾಗೂ ಅನೇಕ ಕಾರ್ಯಕರ್ತರು ಉತ್ಸಾಹದಿಂದ ಕಾರ್ಯಕ್ರಮವನ್ನು ಸಂಘಟಿಸಿದ್ದರು.

ಚಿಕ್ಕಬಳ್ಳಾಪುರದ ಸೀಮಂಗಲದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶ್ರಿ ನಾಗೇಶ್ ಹೆಗ್ಡೆಯವರು ಅದನ್ನು ಉದ್ಘಾಟಿಸಿ ಮಕ್ಕಳು ಹಾಗೂ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಸುತ್ತಮುತ್ತಲ ೧೦ ಗ್ರಾಮಗಳಿಂದ ಜನರು ಆಗಮಿಸಿದ್ದರು. ಧಾರವಾಡದ ಕಡಪ ಮೈದಾನ, ತುಮಕೂರಿನ ಎಂ.ಜಿ. ಸ್ಟೇಡಿಯಂ, ಹಾಸನದ ಹೈಸ್ಕೂಲ್ ಮೈದಾನ, ಹೊಸಪೇಟೆಯ ತಾಲೂಕು ಕ್ರೀಡಾಂಗಣ, ಪಿ.ಡಿ.ಐ.ಟಿ ಇಂಜಿನೀಯರಿಂಗ್ ಕಾಲೇಜು ಆವರಣ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ವೀಕ್ಷಣಾ ವ್ಯವಸ್ಥೆ ಮಾಡಿದ್ದು ಎಲ್ಲ ಕಡೆ ಶುಕ್ರಸಂಕ್ರಮ ನೋಡಲು ಸಾಧ್ಯವಾಗಿರುತ್ತದೆ ಎಂದು ಈ.ಬಸವರಾಜು ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಸುಮಾರು ೧೦೦ ಕಾರ್ಯಾಗಾರಗಳನ್ನು ಸಂಘಟಿಸಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿತ್ತು. ಎಂಟು ಸಾವಿರ ಸೌರ ಕನ್ನಡಕಗಳು ಹಾಗೂ ೫೦೦೦ ಶುಕ್ರ ಸಂಕ್ರಮ ಪುಸ್ತಕಗಳನ್ನು ಸುಲಭ ಬೆಲೆಯಲ್ಲಿ ಮಾರಾಟ ಮಾಡಲಾಗಿತ್ತು. ಸುರಕ್ಷಿತ ಕನ್ನಡಕಗಳ ಬಗ್ಗೆ ಹಾಗೂ ಶುಕ್ರ ಸಂಕ್ರಮದ ಮಾಹಿತಿ ಕೇಳಿ ನಿನ್ನೆ ಮುಂಜಾನೆಯಿಂದ ರಾತ್ರಿ ೧೨ ರ ವರೆಗೆ ಹಾಗೂ ಇಂದು ಬೆಳಿಗ್ಗೆ ೫ ಗಂಟೆಯಿಂದ ಹತ್ತರ ವರೆಗೆ ಸಾರ್ವಜನಿಕರ ದೂರವಾಣಿ ಕರೆಗಳು ಎಷ್ಟಿದ್ದವೆಂದರೆ ಕರೆಗಳನ್ನು ಸ್ವೀಕರಿಸುದೇ ಕಷ್ಟವಾಗಿ ಹೋಗಿತ್ತು.

ಮುಂದಿನ ಶುಕ್ರ ಸಂಕ್ರಮವನ್ನು ಈಗ ಬದುಕಿರುವವರು ನೋಡಲು ಸಾಧ್ಯವಿಲ್ಲದಿದ್ದರೂ ಈ ಶುಕ್ರ ಸಂಕ್ರಮ ಉಂಟು ಮಾಡಿರುವ ಉತ್ಸಾಹದಿಂದಾಗಿ ಮುಂದಿನ ದಿನಗಳಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಜನ ಸಾಮಾನ್ಯರ ನಡುವೆ ಖಗೋಳಾಸಕ್ತಿ ಮೂಡಿಸುವ ಅನೇಕ ಚಟುವಟಿಕೆಗಳನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಬೆಂಗಳೂರು ಅಸ್ಟ್ರನಾಮಿಕಲ್ ಸೊಸೈಟಿಗಳು ಸಂಘಟಿಸಲಿವೆ.

ಈ.ಬಸವರಾಜು
ಕಾರ್ಯದರ್ಶಿ

No comments:

Post a Comment